ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಗನ್ ಜೈಲಿನಿಂದ ಬಿಡುಗಡೆ

ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಜೈಲು ಪಾಲಾಗಿದ್ದ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿಗೆ ..

Lingaraj Badiger
Updated On : 24 Sept 2013, 3:46 am

ಹೈದರಾಬಾದ್: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಜೈಲು ಪಾಲಾಗಿದ್ದ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿಗೆ ಕಡೆಗೂ ಬಿಡುಗಡೆಯ ಭಾಗ್ಯ ದೊರೆತಿದ್ದು, ಮಂಗಳವಾರ ಮಧ್ಯಾಹ್ನ ಜೈಲಿನಿಂದ ಹೊರ ಬಂದಿದ್ದಾರೆ.

16 ತಿಂಗಳ ನಂತರ ಹೈದರಾಬಾದ್‌ನ ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ಕೋರ್ಟ್ ನಿನ್ನೆ ಜಗನ್‌ಗೆ ಜಾಮೀನು ಮಂಜೂರು ಮಾಡಿತ್ತು. ಇಂದು ಜಾಮೀನು ಸಂಬಂಧ ಕೋರ್ಟ್ ವಿಧಿಸಿದ್ದ ಕೆಲವು ಷರತ್ತುಗಳನ್ನು ಪೂರೈಸಿದ ನಂತರ ಜಗನ್‌ಮೋಹನ್ ರೆಡ್ಡಿಯನ್ನು ಚಂಚಲಗೂಡ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಜೈಲಿನ ಹೊರಗಡೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜಗನ್ ಅಭಿಮಾನಿಗಳು ಅವರನ್ನು ಸ್ವಾಗತಿಸಿ, ಸಂಭ್ರಮಿಸಿದರು.

ನ್ಯಾಯಾಧೀಶ ಯು. ದುರ್ಗಾಪ್ರಸಾದ್ ಅವರು ಜಗನ್‌ಗೆ ಎರಡು ಲಕ್ಷದ ಭದ್ರತಾ ಬಾಂಡ್ ಮೇಲೆ ಜಾಮೀನು ನೀಡಿದ್ದರು. ಇನ್ನೊಂದು ಪ್ರಕರಣದಲ್ಲೂ ಇಷ್ಟೇ ಮೊತ್ತದ ಬಾಂಡ್ ಮೇಲೆ ಜಗನ್‌ಗೆ ಜಾಮೀನು ನೀಡಲಾಗಿದೆ.

ಜಾಮೀನು ನೀಡುವ ಸಂದರ್ಭದಲ್ಲಿ ಜಗನ್‌ಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದ್ದು ಹೈದರಾಬಾದ್ ಬಿಟ್ಟು ಎಲ್ಲಿಗೂ ಹೋಗದಂತೆ ಸೂಚನೆ ನೀಡಲಾಗಿದೆ. ಪ್ರತ್ಯಕ್ಷವಾಗಲಿ, ಪರೋಕ್ಷವಾಗಲಿ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಾರದು ಎಂದೂ ಸೂಚಿಸಲಾಗಿದೆ. ಅಲ್ಲದೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ನಲ್ಲಿ ಹಾಜರಿರುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಇದೇ ವೇಳೆ ಜಗನ್‌ಗೆ ನೀಡಿರುವ ಜಾಮೀನಿನ ರದ್ದು ಕೋರಿ ಸಿಬಿಐ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಬಹುದು ಎಂದೂ ಕೋರ್ಟ್ ಹೇಳಿದೆ.

ವೈ.ಎಸ್. ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ತಂದೆಯ ಅಧಿಕಾರ ಬಳಸಿ ಅಕ್ರಮ ಆಸ್ತಿ ಸಂಪಾದಿಸಿದ್ದು ಎಂಬ ಆರೋಪದ ಮೇಲೆ ಜೈಲುಪಾಲಾಗಿದ್ದರು. 2012ರ ಮೇ 27 ರಂದು ಜಗನ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement