ಲಂಚ ಪಡೆದ ಸಚಿವರ ಹೆಸರು ಬಹಿರಂಗಪಡಿಸಿ: ಸಿಂಗ್‌ಗೆ ಶಿಂಧೆ ಸವಾಲ್
ಜಮ್ಮು ಮತ್ತು ಕಾಶ್ಮೀರ ಸಚಿವರು ಸೇನೆಯಿಂದ ಲಂಚ ಪಡೆದಿದ್ದಾರೆ ಎಂದು ಆರೋಪ ಮಾಡಿರುವ ಜನರಲ್ ವಿ.ಕೆ. ಸಿಂಗ್ ಅವರು...
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಸಚಿವರು ಸೇನೆಯಿಂದ ಲಂಚ ಪಡೆದಿದ್ದಾರೆ ಎಂದು ಆರೋಪ ಮಾಡಿರುವ ಜನರಲ್ ವಿ.ಕೆ. ಸಿಂಗ್ ಅವರು, ತಮ್ಮಿಂದ ಲಂಚ ಪಡೆದಿರುವ ಸಚಿವರ ಹೆಸರನ್ನು ಬಹಿರಂಗ ಪಡಿಸುವಂತೆ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ಮಂಗಳವಾರ ಸವಾಲ್ ಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇನೆಯಿಂದ ಸಚಿವರು ಲಂಚ ಪಡೆದಿದ್ದೆ ಆದರೆ ಆ ಸಚಿವರ ಹೆಸರನ್ನು ಬಹಿರಂಗ ಪಡಿಸುವಂತೆ ವಿ.ಕೆ. ಸಿಂಗ್ ಅವರಿಗೆ ಸವಾಲ್ ಹಾಕಿದ್ದಾರೆ. ಅಲ್ಲದೆ ಸಿಂಗ್ ಅವರು ಸಚಿವರ ಹೆಸರನ್ನು ಬಹಿರಂಗಪಡಿಸಿದರೆ ಈ ಸಂಬಂಧ ತನಿಖೆ ನಡೆಸಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಸೇನೆ ಹಣ ನೀಡಿತ್ತು. ಇದೇನು ಹೊಸದಲ್ಲ ಹಿಂದಿನಿಂದಲು ನಡೆದುಕೊಂಡು ಬಂದಿದೆ. ಅಲ್ಲದೆ ರಾಜ್ಯದ ಅಭಿವೃದ್ಧಿ ಸಲುವಾಗಿ ಹಣವನ್ನು ನೀಡುವ ಸಂಪ್ರದಾಯ ಸ್ವಾತಂತ್ರ ಬಂದಾಗಿನಿಂದಲು ನಡೆದುಕೊಂಡು ಬರುತ್ತಿದೆ. ಹೀಗಾಗಿ ಜಮ್ಮು ಕಾಶ್ಮೀರಕ್ಕೆ ಹಣ ನೀಡುವುದರಲ್ಲಿ ತಪ್ಪೇನಿದೆ ಎಂದು ಶಿಂಧೆ ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರತೆ ಕಾಪಾಡುವ ಸಲುವಾಗಿ ಸೇನೆಯಿಂದ ಸಚಿವರಿಗೆ ಹಣ ನೀಡಲಾಗಿತ್ತು ಎಂದು ಸಿಂಗ್ ಆರೋಪಿಸಿದ್ದರು. ಆದರೆ ಇಂದು ಯೂ ಟರ್ನ್ ಹೊಡೆದಿರುವ ಸಿಂಗ್, ಸೇನೆಯಿಂದ ಸಚಿವರು ಹಣ ಪಡೆದಿದ್ದು, ಅದು ನಾಗರಿಕರ ಮನಸ್ಸು ಗೆಲ್ಲುವುದಕ್ಕೆ ಬಳಕೆ ಮಾಡಿದ್ದಾರೆ ಹೊರತು ತಮ್ಮ ಖಾಸಗಿ ಬದುಕಿಗಾಗಿ ದುರ್ಬಳಕೆ ಮಾಡಿಲ್ಲ. ಹೀಗಾಗಿ ಸಚಿವರು ಲಂಚ ಪಡೆದಿಲ್ಲ. ಜಮ್ಮುವಿನ ಒಳಿತಿಗಾಗಿ ಈ ಹಣ ಬಳಕೆಯಾಗಿದೆ ಎಂದು ತಿಳಿಸಿದ್ದಾರೆ.