ಆನಂದ್ ಸಿಂಗ್ ಜಾಮೀನಿಗೆ ಸಿಬಿಐ ಆಕ್ಷೇಪ, ವಿಚಾರಣೆ ಮುಂದೂಡಿಕೆ
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿರುವ ವಿಜಯನಗರ ಶಾಸಕ ಆನಂದ್ ಸಿಂಗ್ ಸಲ್ಲಿಸಿದ್ದ...
ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಬಂಧನ ಭೀತಿಯಲ್ಲಿರುವ ವಿಜಯನಗರ ಶಾಸಕ ಆನಂದ್ ಸಿಂಗ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿದ್ದು, ವಿಚಾರಣೆಯನ್ನು ನ್ಯಾಯಾಲಯ ಸೆ, 26ಕ್ಕೆ ಮುಂದೂಡಿದೆ.
ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಟ ಮಾಡಿದ್ದ ಆರೋಪದ ಮೇಲೆ ಬಂಧನದ ಭೀತಿ ಎದುರಿಸುತ್ತಿದ್ದ ಆನಂದ್ ಸಿಂಗ್, ಸೋಮವಾರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಕೋರ್ಟ್ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ, ಜಾಮೀನು ನೀಡುವುದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿಚಾರಣೆಯನ್ನು ಸೆ, 26ಕ್ಕೆ ಮುಂದೂಡಿತು.
ಸಿಬಿಐ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿರುವ ಆನಂದ್ ಸಿಂಗ್, ಅನಾರೋಗ್ಯದ ಕಾರಣ ನೀಡಿ, ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತಮಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ತಮ್ಮ ವಕೀಲರ ಮೂಲಕ ಸಿಬಿಐ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಶಾಸಕ ಆನಂದ್ ಸಿಂಗ್ಗೆ ಸಿಬಿಐ ನೋಟಿಸ್ ಜಾರಿ ಮಾಡಿತ್ತು. ಆದರೆ ವಿಚಾರಣೆಗೆ ಹಾಜರಾಗದೆ ಶಾಸಕ ತಲೆ ಮರೆಸಿಕೊಂಡಿದ್ದರು.
ಸಿಬಿಐ ಅಧಿಕಾರಿಗಳೊಂದಿಗೆ ಆಲಿಖಾನ್ ಜಟಾಪಟಿ
ಈ ಮಧ್ಯೆ, ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಆಲಿಖಾನ್ರನ್ನು ಇಂದು ಸಿವಿಲ್ ಕೋರ್ಟ್ಗೆ ಹಾಜರುಪಡಿಸಿದರು. ಈ ವೇಳೆ ಆಲಿಖಾನ್ ಹಾಗೂ ಸಿಬಿಐ ಅಧಿಕಾರಿಗಳ ನಡುವೆ ಜಟಾಪಟಿ ನಡೆಯಿತು.
ಪೊಲೀಸ್ ಜೀಪ್ ಹತ್ತಲು ನಿರಾಕರಿಸಿದ ಆಲಿಖಾನ್ ತನಗೆ ಇನ್ನೋವ ಕಾರು ಬೇಕು. ಇಲ್ಲದಿದ್ದರೆ ನಾನು ಕೋರ್ಟ್ಗೆ ಬರುವುದಿಲ್ಲ ಎಂದು ಖ್ಯಾತೆ ತೆಗೆದಿದ್ದ. ಇದರಿಂದ ಸಿಬಿಐ ಅಧಿಕಾರಿಗಳು ಆತನನ್ನು ಬಲವಂತವಾಗಿ ಜೀಪ್ ಹತ್ತಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ತಾನು ಹೆಲಿಕಾಪ್ಟರ್ನಲ್ಲಿ ಓಡಾಡಿದ ವ್ಯಕ್ತಿ. ಹೀಗಾಗಿ ತನಗೆ ಓಡಾಡಲು ಇನ್ನೋವ ಕಾರು ಬೇಕು ಎಂದು ವಾದಿಸಿದ. ಇದರಿಂದ ಕೆರಳಿದ ನ್ಯಾಯಾಧೀಶರು, ಆರೋಪಿ ಜೀಪ್ ಹತ್ತಲು ನಿರಾಕರಿಸಿದರೆ ಕೈಕಾಲು ಕಟ್ಟಿ ಬಿಎಂಟಿಸಿ ಬಸ್ಸ್ನಲ್ಲಿ ಕರೆದುಕೊಂಡು ಹೋಗುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚಿಸಿದರು.