ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್‌ಗಾಗಿ ಸಿಬಿಐ ಹೋರಾಟ: ಮೋದಿ

ಪಂಜರದ ಗಿಳಿಯಂತೆ ಕಾರ್ಯನಿರ್ವಹಿಸುತ್ತಿರುವ ಸಿಬಿಐ, ಕಾಂಗ್ರೆಸ್ ಕೈಗೊಂಬೆಯಾಗಿ ಕಾಂಗ್ರೆಸ್ ಪರ ಹೋರಾಡುತ್ತಿದೆ ಎಂದು...

Vishwanath S
Updated On : 25 Sept 2013, 5:30 am

ಭೋಪಾಲ್: ಪಂಜರದ ಗಿಳಿಯಂತೆ ಕಾರ್ಯನಿರ್ವಹಿಸುತ್ತಿರುವ ಸಿಬಿಐ, ಕಾಂಗ್ರೆಸ್ ಕೈಗೊಂಬೆಯಾಗಿ ಕಾಂಗ್ರೆಸ್ ಪರ ಹೋರಾಡುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಆರೋಪಿಸಿದ್ದಾರೆ.

ಇಂದು ಭೋಪಾಲ್‌ನಲ್ಲಿ ಬಿಜೆಪಿ ಮಹಾಕುಂಭ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಬಿಐ ಕಾಂಗ್ರೆಸ್‌ಗಾಗಿ ಹೋರಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ದೇಶದಲ್ಲಿ ಸುಮಾರು 60 ವರ್ಷಗಳಿಂದ ಆಡಳಿತ ನೀಡುತ್ತಾ ಬಂದಿದ್ದರೂ ಕಾಂಗ್ರೆಸ್ ಸಾಧಿಸಿದ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು. ರಾಷ್ಟ್ರದಲ್ಲಿ ಕಾಂಗ್ರೆಸ್ ಮುಕ್ತ ಸರ್ಕಾರದ ಅವಶ್ಯಕತೆ ಇದೆ ಎಂದಿದ್ದಾರೆ.

ಸ್ವಾತಂತ್ರ ನಂತರ ಭಾರತದಲ್ಲಿ ಕಾಂಗ್ರೆಸ್‌ನ್ನು ಕಿತ್ತುಹಾಕಬೇಕು ಎಂಬುದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಆಶಯವಾಗಿತ್ತು. ಆದರೆ ಕಾಂಗ್ರೆಸ್ ಗಾಂಧಿ ಅವರ ಆಶಯದಂತೆ ನಡೆದುಕೊಂಡಿಲ್ಲ. ಹೀಗಾಗಿ ಮಹಾತ್ಮನ ಆಶಯದಂತೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಸರ್ಕಾರ ಅಧಿಕಾರಕ್ಕೆ ತರಬೇಕಿದೆ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 10 ವರ್ಷಗಳ ಆಡಳಿತಾವಧಿಯಲ್ಲಿ ಮಧ್ಯಪ್ರದೇಶದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಆದರೆ ಮಧ್ಯಪ್ರದೇಶ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಕಡೆಗಣನೆ ಮಾಡಿತ್ತು. ಕಾಂಗ್ರೆಸೇತರ ಅಧಿಕಾರ ಹೊಂದಿರುವ ರಾಜ್ಯಗಳಲ್ಲಿ ಗಣನೀಯವಾಗಿ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ದೇಶದ ಜನರು ಕಾಂಗ್ರೆಸ್‌ನ ಭ್ರಷ್ಟಾಚಾರದಿಂದ ನಲುಗಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಕೆಳಗಿಳಿಸಲು ಮುಂದಾಗಬೇಕು. ಸದ್ಯ ದೇಶಾದ್ಯಂತ ಬಿಜೆಪಿ ಪರ ಅಲೆಯಿದೆ. ಹೀಗಾಗಿ ಕಾರ್ಯಕರ್ತರು ಹೆಚ್ಚು ಶ್ರಮ ವಹಿಸಿ ಪ್ರಚಾರ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ನಮ್ಮೆಲ್ಲರಿಗೂ 'ಮಾರ್ಗದರ್ಶಿ ದೀಪ'ವಿದ್ದಂತೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡೋಣ ಎಂದು ಮೋದಿ ಹೇಳಿದರು.

ರ್ಯಾಲಿಯಲ್ಲಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕರಾದ ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಹಿರಿಯ ನಾಯಕಿ ಉಮಾಭಾರತಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮುರಳಿ ಮನೋಹರ್ ಜೋಶಿ, ಸಂಸದ  ಡಾ. ಜೋಶಿ ಲೂದ್ ಅವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement