ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಯೆ ಮುಂದಿನ ಪ್ರಧಾನಿ: ರಾಜನಾಥ್ ಸಿಂಗ್

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ, ಅದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ...

Vishwanath S
Updated On : 25 Sept 2013, 3:37 am

ಭೋಪಾಲ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ, ಅದನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.

ಭೋಪಾಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಮಹಾಕುಂಭ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿ, ಮೋದಿ ಅವರೇ ಪ್ರಧಾನಿಯಾಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದ ರಾಜನಾಥ್ ಸಿಂಗ್, ದೇಶದಲ್ಲಿ ನಡೆದ ಹಲವು ಬಹುಕೋಟಿ ಹಗರಣಗಳಲ್ಲಿ ಕಾಂಗ್ರೆಸಿನದ್ದೆ ಸಿಂಹಪಾಲು. ಹೀಗಾಗಿ ಭ್ರಷ್ಟಾಚಾರದಲ್ಲಿ ಯುಪಿಎ ಸರ್ಕಾರ ದಾಖಲೆ ಮಾಡಿದೆ ಎಂದು ವ್ಯಂಗ್ಯವಾಡಿದರು. ಯುಪಿಎ ಆಡಳಿತವಧಿಯಲ್ಲಿ ದೇಶದ ಅಭಿವೃದ್ದಿಗಿಂತ ಭ್ರಷ್ಟಾಚಾರದ ದಾಖಲೆಯೇ ಹೆಚ್ಚಾಗಿದೆ ಎಂದರು.

ಬಿಜೆಪಿ ಪಕ್ಷ ಕಾಂಗ್ರೆಸ್‌ಗಿಂತ ಏನು ಕಡಿಮೆಯಿಲ್ಲ. ಬಿಜೆಪಿ ಅಧಿಕಾರವಧಿಯಲ್ಲಿ ಉತ್ತಮ ಅಭಿವೃದ್ಧಿ ಹಾಗೂ ಪ್ರಗತಿ ಪಥದಲ್ಲಿ ದೇಶವನ್ನು ಮುನ್ನಡೆಸಿದೆ. ಹೀಗಾಗಿ ಕಾಂಗ್ರೆಸ್‌ಗಿಂತ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತಮ ಕಾರ್ಯಗಳಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಜಯಭೇರಿ ಭಾರಿಸುತ್ತದೆ. ಮೋದಿ ಅವರೆ ಪ್ರಧಾನಿಯಾಗುತ್ತಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು, ಈ ರ್ಯಾಲಿಯಲ್ಲಿ ನೆರೆದಿರುವ ಅಪಾರ ಜನಸ್ತೋಮ ನೋಡಿದರೆ ಇದು ಬದಲಾವಣೆಯ ಸಂಕೇತವಾಗಿ ನನಗೆ ಕಾಣುತ್ತಿದೆ. ಬಿಜೆಪಿಗೆ ಸದಾ ವಿಪಕ್ಷದವರೆಂದು ಕರೆಯಿಸಿಕೊಳ್ಳವ ಇಚ್ಛೆಯೇನಿಲ್ಲ. ಕೇಂದ್ರದಲ್ಲಿ ಸ್ಥಿರ ಸರ್ಕಾರ ನೀಡಲು ಪಕ್ಷಕ್ಕೆ ಸಾಮರ್ಥ್ಯವಿದೆ. ಪಕ್ಷದಲ್ಲಿನ ನಾಯಕರ ಸಾಮರ್ಥ್ಯಕ್ಕೆ ಯಾರೂ ಸಾಟಿಯಿಲ್ಲ. ಬಿಜೆಪಿಯ ಸಾಧನೆ ಜತೆ ಯಾವ ಪಕ್ಷವೂ ಸ್ಪರ್ಧಿಸಲು ಸಾಧ್ಯವಿಲ್ಲ ಎಂದರು.

ಪಕ್ಷದ ಪ್ರಧಾನಿ ಅಭ್ಯರ್ಥಿ ವೇದಿಕೆಯಲ್ಲಿರುವುದು ನನಗೆ ಗೌರವವಿದೆ. ಉತ್ತಮ ಕೆಲಸಗಳಿಂದಾಗಿ ಪಕ್ಷ ಈ ಸ್ಥಾನಕ್ಕೆ ತಲುಪಿದೆ, ಕೇವಲ ಭಾಷಣದಿಂದ ಪಕ್ಷ ಈ ಸ್ಥಾನಕ್ಕೆ ಬಂದಿಲ್ಲ, ಈ ವಿಚಾರ ನನ್ನ ವೈಯಕ್ತಿಕ ಅನುಭವಕ್ಕೆ ಬಂದಿದೆ ಎಂದರು. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ನನಗೆ ಮೆಚ್ಚುಗೆಯಿದೆ. ಗುಜರಾತ್‌ನಲ್ಲಿ ಮೋದಿ ಅವರು ಉತ್ತಮ ಅಭಿವೃದ್ದಿ ಮಾಡಿದ್ದಾರೆ. ಗುಜರಾತ್‌ನ ಅಭಿವೃದ್ಧಿ ಇತರ ರಾಜ್ಯಗಳಿಗೂ ಪ್ರೇರಣೆಯಾಗಿದೆ ಎಂದು ಆಡ್ವಾಣಿ ಹೇಳಿದ್ದಾರೆ.

ರ್ಯಾಲಿಯಲ್ಲಿ ಪಕ್ಷದ ಹಿರಿಯ ನಾಯಕಿ ಉಮಾಭಾರತಿ, ವೆಂಕಯ್ಯನಾಯ್ಡು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮುರಳಿ ಮನೋಹರ್ ಜೋಶಿ, ಸಂಸದ  ಡಾ. ಜೋಶಿ ಲೂದ್ ಅವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement