ವಿ.ಕೆ. ಸಿಂಗ್ ಆರೋಪ ವಿರುದ್ಧ ತನಿಖೆಗೆ ಓಮರ್ ಆಗ್ರಹ
ಶ್ರೀನಗರ: ಮಾಜಿ ಸೇನೆ ಮುಖ್ಯಸ್ಥ ವಿ.ಕೆ. ಸಿಂಗ್ ಅವರ ಆರೋಪದ ವಿರುದ್ಧ ಕೊನೆಗು ಮೌನ ಮುರಿದಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಆರೋಪದ ವಿರುದ್ಧ ತನಿಖೆ ಮಾಡುವಂತೆ ಬುಧವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ.ಕೆ. ಸಿಂಗ್ ಅವರ ಆರೋಪ ಸುಳ್ಳು ಅಥವಾ ನಿಜ ಎಂದು ವ್ಯಾಖ್ಯಾನ ಮಾಡಲು ಇದು ಸೂಕ್ತ ಸಮಯವಲ್ಲ. ಹೀಗಾಗಿ ಆರೋಪದ ವಿರುದ್ಧ ತನಿಖೆಗೆ ಆಗ್ರಹಿಸಿ ಜನರಿಗೆ ಸತ್ಯ ತಿಳಿಯುವಂತಾಗಬೇಕು ಎಂದರು.
ತಾಂತ್ರಿಕ ಸೇವಾ ಘಟಕದ ಮೂಲಕ ಸೇನೆಯ ಹಿರಿಯ ಅಧಿಕಾರಿಗಳ ದೂರವಾಣಿ ಕರೆಗಳ ಕದ್ದಾಲಿಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಕದ್ದಾಲಿಕೆ ಮಾಡಲು 2010ರಲ್ಲಿ ರಾಜ್ಯ ಕೃಷಿ ಸಚಿವ ಗುಲಾಂ ಹಸನ್ ಮೀರ್ ಅವರಿಗೆ 1.19 ಕೋಟಿ ರುಪಾಯಿ ನೀಡಲಾಗಿತ್ತು ಎಂಬ ಸಿಂಗ್ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಓಮರ್ ಅಬ್ದುಲ್ಲಾ, ಕೇಂದ್ರ ಸರ್ಕಾರ ಇದನ್ನು ಕಡೆಗಣಿಸಬಾರದು. ಈ ಸಂಬಂಧ ಕೂಡಲೆ ತನಿಖೆ ನಡೆಸುವಂತೆ ತಿಳಿಸಿದ್ದಾರೆ.
ಈ ಆರೋಪದ ವಿರುದ್ಧ ಸೂಕ್ತವಾದ ತನಿಖೆ ನಡೆಸಿ ಇದರಿಂದ ಕೇಂದ್ರ ಸರ್ಕಾರ ಮುಕ್ತವಾಗಬೇಕು. ಇಲ್ಲದಿದ್ದರೆ ಎಲ್ಲಾ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅನುಮಾನದ ದೃಷ್ಟಿಯಿಂದ ನೋಡಬೇಕಾಗುತ್ತದೆ ಎಂದು ಹೇಳಿದ್ದಾರೆ.