ಕಾಶ್ಮೀರ: ಉಗ್ರರ ದಾಳಿಗೆ ಪ್ರಧಾನಿ ಖಂಡನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಭಾರತೀಯ ಸೇನಾ ಕ್ಯಾಂಪ್ಗಳ ಮೇಲೆ ಮತ್ತು ಪೊಲೀಸರ ಮೇಲೆ ಉಗ್ರರು ನಡೆಸಿದ..
ಫ್ರಾಂಕ್ಫರ್ಟ್: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಭಾರತೀಯ ಸೇನಾ ಕ್ಯಾಂಪ್ಗಳ ಮೇಲೆ ಮತ್ತು ಪೊಲೀಸರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಖಂಡಿಸಿದ್ದಾರೆ. ಅಲ್ಲದೆ ಈ ದಾಳಿ ಪಾಕಿಸ್ತಾದೊಂದಿಗೆ ನಡೆಸಲು ಉದ್ದೇಶಿಸಿರುವ ಶಾಂತಿ ಮಾತುಕತೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.
ಶಾಂತಿ ಕದಡುವ ಉದ್ದೇಶದಿಂದ ನಡೆಸಲಾಗುತ್ತಿರುವ ಉಗ್ರರ ಪ್ರಚೋದಿತ ದಾಳಿಗಳಲ್ಲಿ ಇದು ಒಂದು. ಇದರಿಂದ ಉಗ್ರರ ಉದ್ದೇಶ ಈಡೇರುವುದಿಲ್ಲ. ಶಾಂತಿ ಮಾತುಕತೆಯ ಮೂಲಕ ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಮ್ಮ ಪ್ರಯತ್ನಗಳು ಮುಂದುವರೆಯಲಿವೆ ಎಂದು ಮನಮೋಹನ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದೇ ಭಾನುವಾರ ಮಾತುಕತೆ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಬೆಳಗ್ಗೆ ಶ್ರೀನಗರದ ಕತಾವುನಲ್ಲಿರುವ ಪೊಲೀಸ್ ಠಾಣೆ ಮೇಲೆ ಹಾಗೂ ಸಾಂಬಾ ಪಕ್ಕದಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಸಿಂಗ್ ಹಾಗೂ ಷರೀಫ್ ಮಾತುಕತೆಗೆ ಕೇವಲು 72 ಗಂಟೆಗಳು ಬಾಕಿ ಇರುವಾಗಲೇ, ಪಾಕ್ ಉಗ್ರರು ಭಾರತದ ಗಡಿಯಲ್ಲಿ ಅಟ್ಟಹಾಸಗೈದಿದ್ದಾರೆ. ಇದರಿಂದ ಭಾರತ-ಪಾಕ್ ಮಾತುಕತೆ ಮುರಿದು ಬೀಳಲಿದೆ ಎನ್ನಲಾಗಿತ್ತು.