ಜಮ್ಮುನಲ್ಲಿ ಉಗ್ರರ ದಾಳಿ: ಕಾದಾಟದಲ್ಲಿ 12 ಸಾವು
ಇಲ್ಲಿನ ಕತಾವುನಲ್ಲಿರುವ ಪೊಲೀಸ್ ಠಾಣೆಯೊಂದರ ಮೇಲೆ ಗುರುವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ...
ಶ್ರೀನಗರ: ಇಲ್ಲಿನ ಕತಾವುನಲ್ಲಿರುವ ಪೊಲೀಸ್ ಠಾಣೆಯೊಂದರ ಮೇಲೆ ಗುರುವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರ ಮಾತುಕತೆಗೆ 72 ಗಂಟೆಗಳು ಬಾಕಿಯಿರುವಾಗಲೇ, ಪಾಕ್ ಉಗ್ರರು ಭಾರತದ ಗಡಿ ಪ್ರದೇಶದಲ್ಲಿ ಅಟ್ಟಹಾಸಗೈದಿದ್ದಾರೆ.
ಸಾಂಬಾ ಪಕ್ಕದಲ್ಲಿರುವ ಸೇನಾ ಶಿಬಿರದ ಮೇಲೆ ದಾಳಿ ಮಾಡುವ ಮುನ್ನ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಪೊಲೀಸರು ಸೇರಿದಂತೆ 5 ಮಂದಿ ಹತರಾಗಿದ್ದಾರೆ.
ದಾಳಿಯ ಹಿನ್ನೆಲೆಯಲ್ಲಿ ಬೆಳಗ್ಗೆ 8.45ಕ್ಕೆ ಜಮ್ಮು -ಪಠಾಣ್ಕೋಟ್ ಹೈವೇಯಲ್ಲಿ ಸಂಚಾರ ನಿಷೇಧಿಸಲಾಗಿದೆ.
ಸೇನಾ ಶಿಬಿರದ ಬಳಿ ಗೊರಿಲ್ಲಾ ಮತ್ತು ಸೈನಿಕರ ನಡುವೆ ಭಾರೀ ಕಾದಾಟ ನಡೆದಿದ್ದು, ಉಗ್ರರು ಸೇನಾ ಶಿಬಿರದಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಅಲ್ಲಿ ಯಾವುದೇ ರೀತಿಯ ಸಾವು ನೋವುಗಳ ಬಗ್ಗೆ ವರಿದಿಯಾಗಿಲ್ಲ ಎಂದು ಸಾಂಬಾ ಎಸ್ಪಿ ಮಾಹಿತಿ ನೀಡಿದ್ದಾರೆ.
ಸೇನಾ ಶಿಬಿರದ ಸುತ್ತಲೂ ಬಿಎಸ್ಎಫ್ ಯೋಧರು ಸುತ್ತುವರಿದಿದ್ದು, ಸೇನಾ ಹೆಲಿಕಾಪ್ಟರ್ ಉಗ್ರರ ಶೋಧ ನಡೆಸುತ್ತಿದೆ. ಆ ಕಾಳಗದಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.
ಇದೀಗ ಸೇನಾ ಶಿಬಿರದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಇಬ್ಬರು ಉಗ್ರರು ಸೇನಾ ಶಿಬಿರದೊಳಗೆ ಅವಿತಿದ್ದಾರೆ ಎಂದು ಶಂಕಿಸಲಾಗಿದೆ. ಮಾತ್ರವಲ್ಲದೆ ಉಗ್ರರನ್ನು ಸದೆಬಡಿಯಲು ಹೆಚ್ಚುವರಿ ಪೊಲೀಸ್, ಸಿಆರ್ಪಿಎಫ್ ಮತ್ತು ಸೇನೆಯನ್ನು ಕರೆಸಲಾಗಿದೆ ಎಂದು ಐಜಿ ರಾಜೇಶ್ ಕುಮಾರ್ ಹೇಳಿದ್ದಾರೆ.
ಸೇನೆಯ ಸಮವಸ್ತ್ರ ಧರಿಸಿದ 4 ಉಗ್ರರು ಸೇನಾ ಶಿಬಿರದೊಳಗೆ ನುಸುಳಿ ದಾಳಿ ನಡೆಸಿದ್ದಾರೆ ಎಂದು ರಾಜೇಶ್ ಕುಮಾರ್ ಹೇಳಿದ್ದಾರೆ.
ಇದೀಗ ಲಭಿಸಿದ ಮಾಹಿತಿಯಂತೆ ರಕ್ಷಣಾ ಪಡೆ ಮತ್ತು ಉಗ್ರರ ನಡುವಿನ ಕಾಳಗದಲ್ಲಿ ಲೆಫ್ಟನೆಂಟ್ ಕರ್ನಲ್ ಹತರಾಗಿದ್ದಾರೆ.
ಬೆಳಗ್ಗೆ ಹರಿನಗರ್ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯಲ್ಲಿ 6 ಪೊಲೀಸರು ಹತ್ಯೆಗೀಡಾಗಿದ್ದಾರೆ ಹಾಗು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಕ್ಷಣ ಕ್ಷಣದ ಸುದ್ದಿ
ಬೆಳಗ್ಗೆ 11.47- ಭಯೋತ್ಪಾದನೆ ಸಂಬಂಧಿ ವಿಷಯಗಳನ್ನು ಪ್ರಧಾನಿ ಸಿಂಗ್ ಪಾಕ್ ಪ್ರಧಾನಿ ಜತೆ ಚರ್ಚಿಸಬೇಕು ಎಂದು ಜನತಾದಳ (ಸಂಯುಕ್ತ) ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ.
ಬೆಳಗ್ಗೆ 11.44 -ಕೇಂದ್ರ ಸರ್ಕಾರ ದುರ್ಬಲವಾಗಿದ್ದು, ಪಾಕ್ ಜತೆ ಮಾತುಕತೆ ರದ್ದು ಪಡಿಸಬೇಕೆಂದು ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗ್ರವಾಲ್ ಹೇಳಿಕೆ
ಬೆಳಗ್ಗೆ 11.40- ಸೇನಾ ಶಿಬರದೊಳಗಿರುವ ಕಟ್ಟಡದಲ್ಲಿ ಉಗ್ರರು ಅವಿತಿದ್ದಾರೆ- ಐಜಿ ರಾಜೇಶ್ ಕುಮಾರ್ ಹೇಳಿಕೆ
ಬೆಳಗ್ಗೆ 11.30- ಜಮ್ಮು ಮತ್ತು ಕಾಶ್ಮೀರದಲ್ಲಿನ ಶಾಂತಿಗೆ ಭಂಗ ಪಡಿಸಲು ಉಗ್ರರು ಈ ದಾಳಿ ನಡೆಸಿದ್ದಾರೆ- ಓಮರ್ ಅಭಿಪ್ರಾಯ
ಬೆಳಗ್ಗೆ 11.26- ಇಂಡೋ ಪಾಕ್ ನಡುವಿನ ಮಾತುಕತೆಯನ್ನು ಹಾದಿ ತಪ್ಪಿಸುವ ಸಲುವಾಗಿಯೇ ಈ ದಾಳಿ ನಡೆಸಲಾಗಿದೆ. ಈ ದಾಳಿಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಮಾತುಕತೆಗೆ ರಾಜಕೀಯ ಒತ್ತಡ ತಲೆದೋರಬಹುದು. ಆದ್ದರಿಂದ ಉಭಯ ರಾಷ್ಟ್ರದ ಪ್ರಧಾನಿಗಳು ಮುಂದಿನ ಕಾರ್ಯಗಳನ್ನು ವಿವೇಚನೆಯಿಂದ ನಡೆಸಬೇಕಾಗಿದೆ ಎಂದು ಓಮರ್ ಹೇಳಿದ್ದಾರೆ.
ಬೆಳಗ್ಗೆ 11.24-ಪ್ರಸ್ತುತ ದಾಳಿಯನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಇವತ್ತು ನಡೆದ ದಾಳಿಯಲ್ಲಿ ಜೀವ ಕಳೆದುಕೊಂಡ ಸೈನಿಕರಿಗೆ ಓಮರ್ ಸಂತಾಪ ಸೂಚಿಸಿದ್ದಾರೆ.
ಬೆಳಗ್ಗೆ 11.20- ಉಗ್ರರ ದಾಳಿಗೆ ಹರಿನಗರ್ ಪೊಲೀಸ್ ಠಾಣೆಯಲ್ಲಿದ್ದ ನಾಲ್ವರು ಪೊಲೀಸರು ಹತರಾಗಿದ್ದಾರೆ ಮತ್ತು ಮೂರ್ನಾಲ್ಕು ಮಂದಿಗೆ ಗಾಯಗಳಾಗಿವೆ ಎಂದು ಐಜಿ ರಾಜೇಶ್ ಕುಮಾರ್ ಹೇಳಿದ್ದಾರೆ.
ಬೆಳಗ್ಗೆ 11.10- ಉಗ್ರರು ಮತ್ತು ಸೈನಿಕರ ನಡುವಿನ ಕಾಳಗ ಮುಂದುವರಿದಿದ್ದು, ಈವರೆಗೆ 12 ಮಂದಿ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 11.05- ಉಗ್ರರ ದಾಳಿ ನಡೆದಿದ್ದರೂ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ನಿಗದಿತ ದಿನದಂದು ನಡೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಲ್ಲಮೂಲಗಳು ಹೇಳಿವೆ.
ಬೆಳಗ್ಗೆ 11.00 - ಪಾಕ್ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಭಾರತ -ಪಾಕ್ ನಡುವಿನ ಮಾತುಕತೆ ರದ್ದು ಮಾಡಬೇಕು. ತಮ್ಮ ಸೇನೆ ಹಾಗು ಐಎಸ್ಐ ಮೇಲೆ ನಿಯಂತ್ರಣ ಸಾಧಿಸಲು ಪರಾಭವಗೊಂಡಿರುವ ಪಾಕ್ ಸರ್ಕಾರದ ಜತೆ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ಬೆಳಗ್ಗೆ 10.55- ಪ್ರಧಾನಿ ಸಿಂಗ್ ಪಾಕ್ ಪ್ರಧಾನಿ ಜತೆ ಮಾತುಕತೆ ನಡೆಸಬಾರದು ಎಂದು ಲೆ. ಜನರಲ್ (ನಿವೃತ್ತ) ಪಿ.ಎನ್ ಹೂನ್ ಹೇಳಿದ್ದಾರೆ.