'ಮಾತಾಡ್ ಮಾತಾಡು ಮಲ್ಲಿಗೆ' ಸೋಲಿಗೆ ವಿಷ್ಣು ಕಾರಣ...!
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ..
ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರದ ಸೋಲಿಗೆ ವಿಷ್ಣು ಕಾರಣ ಅಂತ ಲೇಖಕ ಮುಕುಂದ್ ರಾಜ್ ಅವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಮುಕುಂದ್ ರಾಜ್ ಅವರು ತಮ್ಮ 'ಚಂದ್ರಮಾನ' ಪುಸ್ತಕದಲ್ಲಿ ವಿಷ್ಣುವರ್ಧನ್ ಅವರ ನಟನೆಯನ್ನು ಟೀಕಿಸುವ ಮೂಲಕ 'ಸಾಹಸ ಸಿಂಹನಿಗೆ ಅವಮಾನ' ಮಾಡಲಾಗಿದೆ ಎಂದು ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಲೇಖಕ ಮುಕುಂದ್ ರಾಜ್ ಅವರು, ಮೊದಮೊದಲು ತಾವು ಹೇಳಿದ್ದೆ ಸರಿ ಎಂದು ವಾದಿಸಿದರು. ನಂತರ ವಿಷ್ಣು ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಚಿತ್ರದ ಸೋಲು, ಗೆಲುವಿನ ವಿಮರ್ಶೆ ಮಾಡಿದ್ದೇನೆ. ಚಿತ್ರದ ಸೋಲಿಗೆ ಎಲ್ಲರೂ ಕಾರಣ ಎಂದು ಹೇಳಿದ್ದಾರೆ. ಅಲ್ಲದೆ ತಾವು ಮಾಡಿರುವುದು ದೊಡ್ಡ ಅಪರಾಧವೇನಲ್ಲ. ಆದರೂ ಆ ಬಗ್ಗೆ ತಾವು ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
'ಚಂದ್ರಮಾನ'ದಲ್ಲಿ ಏನಿದೆ?
ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿಮಾ ನಿರ್ದೇಶನ ಮಾಡುವ ಕಾಲಕ್ಕೆ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಸಿನಿಮಾ ಅಂದರೆ ನಾಯಕ ನಟರು ಎನ್ನುವಂತಿತ್ತು. ಆ ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ತರಹದವರನ್ನು ಬಿಟ್ಟರೆ, ನಿರ್ದೇಶಕರಿಗೆ ಮನ್ನಣೆಯೇ ಇರಲಿಲ್ಲ. ಆದರೆ ನಾಗತಿಹಳ್ಳಿ ಅವರು ಸಿನಿಮಾ ಅಂದರೆ ನಿರ್ದೇಶಕ ಎನ್ನುವುದನ್ನು ಪುನರ್ ನಿರೂಪಿಸಿದರು.
ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾ ಕರ್ನಾಟಕದ ಜನ ಅಪ್ಪಿಕೊಂಡು ನೋಡಬೇಕಾದ ಸಿನಿಮಾ. ಅಂತಹ ಸಿನಿಮಾವನ್ನು ಜನ ನೋಡಲಿಲ್ಲ. ಅದಕ್ಕೆ ಕಾರಣ ವಿಷ್ಣುವರ್ಧನ್ರಂತಹ ಹಿರಿಯ ನಟನ ಕೆಟ್ಟ ಅಭಿನಯ. ಹೊಸ ಹುಡುಗರನ್ನು ಹಾಕಿಕೊಂಡು ಮಾಡಿದ ಅಮೆರಿಕಾ ಅಮೆರಿಕಾ ಸಿನಿಮಾ ಯಶಸ್ವಿಯಾಗುತ್ತದೆ. ಆದರೆ ಮಾತಾಡ್ ಮಾತಾಡು ಮಲ್ಲಿಗೆ ಯಶಸ್ವಿಯಾಗಲಿಲ್ಲ.
- ಲೇಖಕ ಮುಕುಂದ್ ರಾಜ್