ಶಾರೂಖ್ ಖಾನ್, ಸಚಿನ್ ಐಟಿ ಖಾತೆ ಹ್ಯಾಕ್: ಮುಂಬೈ ಪೊಲೀಸರು
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಕ್ರಿಕೆಟ್ ಆಟಗಾರರಾದ ದೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಆದಾಯ ತೆರಿಗೆ ಮಾಹಿತಿ ವಿವರ ಸಲ್ಲಿಸುವ ಆನ್ಲೈನ್ ಖಾತೆಯನ್ನ ಚಾರ್ಟರ್ಡ್ ಅಕೌಂಟೆಂಟ್ ವಿದ್ಯಾರ್ಥಿ ಹ್ಯಾಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೆ ಉದ್ಯಮಿ ಅನಿಲ್ ಅಂಬಾನಿ ಅವರ ಆದಾಯ ತೆರಿಗೆ ಮಾಹಿತಿ ವಿವರ ಸಲ್ಲಿಸುವ ಆನ್ಲೈನ್ ಖಾತೆಯನ್ನ ಹೈದ್ರಾಬಾದ್ ಮೂಲದ ಸಿಎ ವಿದ್ಯಾರ್ಥಿನಿಯೊಬ್ಬಳು ಹ್ಯಾಕ್ ಮಾಡಿದ್ದಳು.
ಈ ಸಂಬಂಧ ತನಿಖೆ ಕೈಗೊಂಡಿದ್ದ ಮುಂಬೈ ಪೊಲೀಸರು ಯುವತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದರು. ಇದರೆ ಬೆನ್ನಲ್ಲೆ ನೋಯ್ಡಾದಲ್ಲಿ ಮತ್ತೊಬ್ಬ ಸಿಎ ವಿದ್ಯಾರ್ಥಿ ಬಾಲಿವುಡ್ ಬಿಗ್ ಸ್ಟಾರ್ಗಳ ಖಾತೆಗಳನ್ನು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ.
ತನಿಖೆ ಕೈಗೊಂಡಿದ್ದ ಮುಂಬೈ ಪೊಲೀಸರಿಗೆ ಮತ್ತೊಬ್ಬ ಸಿಎ ವಿದ್ಯಾರ್ಥಿ ಸಂಚಿತ್ ಕಟಿಯಾಲ್ (22) ಬಾಲಿವುಡ್ ನಟರ ಹಾಗೂ ಕ್ರಿಕೆಟ್ ಆಟಗಾರರ ಖಾತೆ ಹ್ಯಾಕ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಈ ವಿದ್ಯಾರ್ಥಿ ವಿಶಾಲ್ ಕುಶಾಲ್ ಕಂಪನಿಯಲ್ಲಿ ಚಾರ್ಟಟೆಡ್ ಅಕೌಂಟೆಂಟ್ ತರಬೇತಿ ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ.
ಜೂನ್ 22ರಂದು ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಅವರ ಖಾತೆ, ಜೂನ್ 24ರಂದು ಅಂಬಾನಿ ಅವರ ಖಾತೆ, ಜೂನ್ 22, 28 ರಂದು ದೋನಿ ಅವರ ಖಾತೆ ಹಾಗೂ ಜುಲೈ 4ರಂದು ಸಚಿನ್ ತೆಂಡೂಲ್ಕರ್ ಅವರ ಖಾತೆ ಹ್ಯಾಕ್ ಮಾಡಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿರ್ದಿಷ್ಟ ಕಲಂ ಅಡಿ ಸೆಪ್ಟೆಂಬರ್ 16ರಂದು ಪ್ರಕರಣ ದಾಖಲಿಸಲಾಗಿದ್ದು, ವಿದ್ಯಾರ್ಥಿಯಿಂದ ಕಂಪ್ಯೂಟರ್, ಹಾರ್ಡ್ಡಿಸ್ಕ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.