ತುಳಸಿ ನಕಲಿ ಎನ್‌ಕೌಂಟರ್ ಪ್ರಕರಣ: ಬಿಜೆಪಿ ನಾಯಕರ ವಿಚಾರಣೆ
ನವದೆಹಲಿ: 2006ರಲ್ಲಿ ನಡೆದ ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕರನ್ನು ಕೇಂದ್ರ ತನಿಖಾ ದಳ(ಸಿಬಿಐ) ಶುಕ್ರವಾರ ವಿಚಾರಣೆಗೊಳಪಡಿಸಿದೆ.
ಬಿಜೆಪಿ ನಾಯಕರಾದ ಪ್ರಕಾಶ್ ಜಾವೇದ್‌ಕರ್, ಭೂಪೇಂದ್ರ ಯಾದವ್, ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ತುಳಸಿ ಪ್ರಜಾಪತಿ ಅವರ ತಾಯಿಯ ಮೇಲೆ ಪ್ರಭಾವ ಬೀರಲು ನರೇಂದ್ರ ಮೋದಿ ಆಪ್ತ ಅಮಿತ್ ಶಾ ಅವರು ಪ್ರಯತ್ನಿಸಿರುವುದರ ಬಗ್ಗೆ ಸಿಬಿಐ ನಡೆಸಿದ ಕುಟುಕು ಕಾರ್ಯಾಚರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಜಾವೇದಕರ್ ಮತ್ತು ಭೂಪೇಂದ್ರ ಯಾದವ್ ಅವರನ್ನು ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ಇಂದು ಮದ್ಯಾಹ್ನ 1.45ರ ಸಮಯದಲ್ಲಿ ಜಾವೇದಕರ್ ಅವರು ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದಲ್ಲಿ ಈ ಮೂವರು ನಾಯಕರ ಹೆಸರು ಕೇಳಿ ಬಂದಿದೆ.
ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿರುವ ಈ ಮೂವರು ನಾಯಕರು, ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡಲಾಗುತ್ತಿದೆ. ನಾವು ಪ್ರಜಾಪತಿ ತಾಯಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಸಿಬಿಐಗೆ ದೊರಕಿರುವ ಸಿಡಿಗೆ ಸಂಬಂಧಪಟ್ಟಂತೆ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಲು ಸಿದ್ಧನಿದ್ದೇನೆ ಎಂದು ಜಾವೇದಕರ್ ಹೇಳಿದ್ದಾರೆ.
ನಮ್ಮ ಮಗ ತುಳಸಿ ಪ್ರಜಾಪತಿಯನ್ನು ನಕಲಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಪ್ರಜಾಪತಿ ತಾಯಿ ನರ್ಮದಾ ಬಾಯ್ ಅವರು ಕೇಸು ದಾಖಲಿಸಿದ್ದರು.
ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಿಂಗ್ ಆಪರೇಷನ್ ನಡೆಸಿದ ವಿಡಿಯೋ ಚಿತ್ರಣವನ್ನು ಸಿಡಿ ರೂಪದಲ್ಲಿ ಕಾಂಗ್ರೆಸ್ ಪ್ರಕಟಿಸಿತ್ತು.
2006ರ ಡಿಸೆಂಬರ್ 28ರಂದು ಪಾಲನ್‌ಪುರ್‌ನ ದಂತಾ ಪಟ್ಟಣ ಸಮೀಪದ ಚಾಪ್ರಿ ಗ್ರಾಮದಲ್ಲಿ ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್ ಮಾಡಲಾಗಿತ್ತು. ಪ್ರಕರಣದಲ್ಲಿ ಅನೇಕ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ದಾವೂದ್ ಇಬ್ರಾಹಿಂ ಜತೆ ನಿಕಟ ಸಂಬಂಧ ಹೊಂದಿದ್ದ ಸೊಹ್ರಾಬುದ್ದೀನ್ ಶೇಖ್ ಹಾಗೂ ಅವರ ಪತ್ನಿ ಕೌಸರ್ ಬಿ ಅವರ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿದ್ದ ತುಳಸಿ ರಾಮ್ ಪ್ರಜಾಪತಿ ಅವರನ್ನು ನಕಲಿ ಎನ್‌ಕೌಂಟರ್ ಮಾಡಲಾಗಿತ್ತು.