ಬಿಸಿಸಿಐ ಚುನಾವಣೆಯಲ್ಲಿ ಶ್ರೀನಿವಾಸನ್ ಸ್ಫರ್ಧಿಸಬಹುದು: ಸುಪ್ರೀಂ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಚುನಾವಣೆಯಲ್ಲಿ ಎನ್ ಶ್ರೀನಿವಾಸನ್ ಅವರು ಸ್ಪರ್ಧಿಸಬಹುದು ಆದರೆ ಚಾರ್ಜ್...
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಚುನಾವಣೆಯಲ್ಲಿ ಎನ್ ಶ್ರೀನಿವಾಸನ್ ಅವರು ಸ್ಪರ್ಧಿಸಬಹುದು ಆದರೆ ಚಾರ್ಜ್ ತೆಗೆದುಕೊಳ್ಳುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನ್ಯಾಯಾಮೂರ್ತಿಗಳಾದ ಎ.ಕೆ ಪಟ್ನಾಯಕ್ ಮತ್ತು ಜಗದೀಶ್ ಸಿಂಗ್ ಕೆಹರ್ ಅವರನ್ನೋಳಗೊಂಡ ನ್ಯಾಯಾಪೀಠ ಈ ಆದೇಶ ಹೊರಡಿಸಿದೆ.
ಬಿಸಿಸಿಐ ಚುನಾವಣೆಯಲ್ಲಿ ಶ್ರೀನಿವಾಸನ್ ಸ್ಪರ್ಧಿಸಬಹುದು. ಒಂದು ವೇಳೆ ಗೆದ್ದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ತಮ್ಮ ಮೇಲೆ ಬಂದಿರುವ ಕಳಂಕವನ್ನು ದೂರ ಮಾಡಿಕೊಂಡ ಮೇಲೆ ಮಾತ್ರ ಶ್ರೀನಿವಾಸನ್ ಅವರು ಅಧಿಕಾರವಹಿಸಿಕೊಳ್ಳಬಹುದು.
ತಮ್ಮ ಮೇಲೆ ಬಂದಿರುವ ಕಳಂಕ ದೂರವಾಗುವವರೆಗೂ ಬಿಸಿಸಿಐನ ಅಧಿಕಾರವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬಿಸಿಸಿಐ ಚುನಾವಣೆಯಲ್ಲಿ ಶ್ರೀನಿವಾಸನ್ ಸ್ಪರ್ಧಿಸದಂತೆ ಆದೇಶ ಹೊರಡಿಸಿ ಎಂದು ಬಿಹಾರದ ಕ್ರಿಕೆಟ್ ಸಂಘ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಇದಲ್ಲದೇ ಶ್ರೀನಿವಾಸನ್ ಅವರ ಮೇಲೆ ಮಧ್ಯಂತರ ನಿಷೇಧ ಜಾರಿಗೊಳಿಸಬೇಕು ಎಂದು ಬಿಹಾರದ ಕ್ರಿಕೆಟ್ ಸಂಘ ಒತ್ತಾಯಿಸಿತ್ತು.
ಐಪಿಎಲ್‌ನ ಆರನೇ ಆವೃತ್ತಿಯಲ್ಲಿ ಶ್ರೀನಿವಾಸನ್ ಅಳಿಯ, ಚೆನ್ನೈ ಸೂಪರ್ ಕಿಂಗ್ಸ್‌ನ ಮುಖ್ಯಸ್ಥ ಗುರುನಾಥ್ ಮೇಯಪ್ಪನ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಮೇಯಪ್ಪನನ್ನು ಬಂಧಿಸಿದ್ದರು. ಈ ಸಂಬಂಧ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಬಿಸಿಸಿಐ ಕಾರ್ಯಕಾರಿಣಿ ಸಮಿತಿಯಲ್ಲಿ ಒತ್ತಡ ಹೆಚ್ಚಾಗಿದ್ದರಿಂದ ಅವರು ಅಧ್ಯಕ್ಷ ಸ್ಥಾನದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದರು.