ಸುಗ್ರೀವಾಜ್ಞೆಯನ್ನು ನಾನ್ಸೆನ್ಸ್ ಎಂದ ರಾಹುಲ್ ಗಾಂಧಿ
ಕೇಂದ್ರ ಸರ್ಕಾರ ಕಳಂಕಿತರ ರಕ್ಷಣೆಗಾಗಿ ತರಾತುರಿಯಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆ ವಿರುದ್ಧ ಶುಕ್ರವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡಿಗಿದ್ದು,..
ನವದೆಹಲಿ: ಕೇಂದ್ರ ಸರ್ಕಾರ ಕಳಂಕಿತರ ರಕ್ಷಣೆಗಾಗಿ ತರಾತುರಿಯಲ್ಲಿ ಹೊರಡಿಸಿದ್ದ ಸುಗ್ರೀವಾಜ್ಞೆ ವಿರುದ್ಧ ಶುಕ್ರವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡಿಗಿದ್ದು, ಸುಗ್ರೀವಾಜ್ಞೆಯನ್ನು ನಾನ್ಸೆನ್ಸ್ ಎಂದು ಕರೆದಿದ್ದಾರೆ.
ಇಂದು ದೆಹಲಿಯ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ರಾಹುಲ್, ಸುಗ್ರೀವಾಜ್ಞೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಅವಿವೇಕತನದ ಪರಮಾವಧಿಯಾಗಿದ್ದು, ಈ ಸುಗ್ರೀವಾಜ್ಞೆಯನ್ನು ಹರಿದು ಬಿಸಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಅರ್ಥಹೀನ, ಇದು ಹರಿದು ಬಿಸಾಕಲು ಲಾಯಕ್ಕು ಎಂದು ಯುವರಾಜ ಕಿಡಿಕಾರಿದ್ದಾರೆ.
ನಿನ್ನೆಯಷ್ಟೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಸಂಬಂಧ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಹಾಗೂ ಕಾನೂನು ಸಚಿವ ಕಪಿಲ್ ಸಿಬಲ್ರನ್ನು ಕರೆಸಿಕೊಂಡು ವಿವರಣೆ ಕೋರಿದ್ದರು. ಇದಲ್ಲದೇ ಸಂಸದೀಯ ವ್ಯವಹಾರಗಳ ಸಚಿವ ಕಮಲ್ ನಾಥ್ ಅವರನ್ನು ಕರೆಸಿಕೊಂಡು ಸುಗ್ರೀವಾಜ್ಞೆ ಬಗ್ಗೆ ವಿವರಣೆ ಪಡೆದುಕೊಂಡಿದ್ದರು ಮತ್ತು ಸುಗ್ರೀವಾಜ್ಞೆ ಬಗ್ಗೆ ಇಷ್ಟೊಂದು ಆತರು ಏಕೆ ಎಂದು ಪ್ರಶ್ನಿಸಿದ್ದರು.
ಇದಕ್ಕೂ ಮುನ್ನ ಆತುರಾತುರವಾಗಿ ಕೇಂದ್ರ ಸರ್ಕಾರ ಪ್ರಜಾಪ್ರಾತಿನಿಧ್ಯ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದನ್ನು ಪ್ರತಿಪಕ್ಷಗಳು ಪ್ರಶ್ನಿಸಿದ್ದವು. ಎಲ್.ಕೆ. ಆಡ್ವಾಣಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಿದ್ದರು.
ಸುಗ್ರೀವಾಜ್ಞೆ ವಾಪಸ್?
ರಾಹುಲ್ ಗಾಂಧಿ ಹೇಳಿಕೆ ಬೆನ್ನಲ್ಲೆ ಸುಗ್ರೀವಾಜ್ಞೆ ವಾಪಸಾತಿಗೆ ಕೇಂದ್ರ ಚಿಂತನೆ ನಡೆಸಿದ್ದು, ಯುವರಾಜನ ಮಾತಿನ ಆರ್ಭಟಕ್ಕೆ ತತ್ತರಿಸಿಹೋದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ನಿರ್ಧರಿಸಿದೆ ಎನ್ನಲಾಗಿದೆ.
ರಾಹುಲ್ ನಿಲುವೇ ನಮ್ಮ ನಿಲುವು: ಅಜಯ್ ಮಕೇನ್
ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿಚಾರದಲ್ಲಿ ರಾಹುಲ್ ಗಾಂಧಿ ನಿಲುವೇ ನಮ್ಮ ನಿಲುವು ಎಂದು ಹೇಳುವ ಮೂಲಕ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ಸಂಸದ ಅಜಯ್ ಮಕೇನ್ ಅವರು ಕಾಂಗ್ರೆಸ್ ಯುವರಾಜನ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
ರಾಹುಲ್ ಹೇಳಿಕೆ ಡ್ರಾಮಾ ಎಂದ ಬಿಜೆಪಿ
ರಾಹುಲ್ ಗಾಂಧಿ ಸುಗ್ರೀವಾಜ್ಞೆಯನ್ನು ನಾನ್ಸೆನ್ಸ್ ಎಂದು ಕರೆದಿರುವುದು ಬರಿ ಡ್ರಾಮಾ ಅಷ್ಟೆ. ರಾಜಕೀಯ ಕಾರಣಗಳಿಗಾಗಿ ಮತ್ತು ಡ್ಯಾಮೇಜ್ ಕಂಟ್ರೋಲ್ಗಾಗಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯಸಭಾ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.