ಸುಗ್ರೀವಾಜ್ಞೆಗೆ ವಿರೋಧ: ರಾಹುಲ್ಗೆ ಜೈ ಅಂದ ಸಿಎಂ
ಕಳಂಕಿತ ಜನಪ್ರತಿನಿಧಿಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ..
ಬೆಂಗಳೂರು: ಕಳಂಕಿತ ಜನಪ್ರತಿನಿಧಿಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲ ಸೂಚಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ಸುಗ್ರೀವಾಜ್ಞೆ ವಿಚಾರದಲ್ಲಿ ವೈಯಕ್ತಿಕವಾಗಿ ರಾಹುಲ್ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಗಿದೆ ಎಂದು ಹೇಳಿದ್ದಾರೆ.
ಕಳಂಕಿತ ಜನಪ್ರತಿನಿಧಿಗಳ ರಕ್ಷಿಸುವ ಸಲುವಾಗಿ ಜಾರಿ ಮಾಡಲು ಹೊರಟಿರುವ ಸುಗ್ರೀವಾಜ್ಞೆ ಸಂಪೂರ್ಣ ಮೂರ್ಖತನದ್ದು, ಇದನ್ನು ಹರಿದು ಕಸದಬುಟ್ಟಿಗೆ ಬಿಸಾಕಬೇಕು ಎಂದು ನಿನ್ನೆ ರಾಹುಲ್ ಗಾಂಧಿ ತಮ್ಮದೇ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೇ ವೇಳೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸ್ಥಗಿತಗೊಳ್ಳುವುದಿಲ್ಲ. ಆದರೆ ಆ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.