ಭಯೋತ್ಪಾದಕರ ಹೆಸರಲ್ಲಿ ಮುಸ್ಲೀಂ ಯುವಕರನ್ನು ಬಂಧಿಸದಿರಿ: ಶಿಂಧೆ
ನವದೆಹಲಿ: ಭಯೋತ್ಪಾದನೆ ಹೆಸರಲ್ಲಿ ಅನಗತ್ಯವಾಗಿ ಅಲ್ಪಸಂಖ್ಯಾತರನ್ನು ಬಂಧಿಸದಿರಿ ಎಂದು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸೋಮವಾರ ಹೇಳಿದ್ದಾರೆ.
ಇಂದು ಶಿಂಧೆ ಅವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಭಯೋತ್ಪಾದಕರ ಹೆಸರಲ್ಲಿ ಅಮಾಯಕ ಮುಸ್ಲೀಂ ಯುವಕರನ್ನು ಬಂಧಿಸಬೇಡಿ ಎಂದು ಸೂಚಿಸಿದ್ದಾರೆ.
ದೇಶದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರಗಳು ಅನುಮಾನಾಸ್ಪದ ಯುವಕರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ. ಇದರಲ್ಲಿ ಮುಸ್ಲೀಂ ಯುವಕರನ್ನು ಭಯೋತ್ಪಾದಕರು ಎಂಬ ಹೆಸರಲ್ಲಿ ಬಂಧಿಸಲಾಗುತ್ತಿದೆ. ಇಂತಹ ಘಟನೆಗಳಿಂದ ಕೆಲ ಮುಸ್ಲೀಂ ಯುವಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.
ಭಯೋತ್ಪಾದನೆ ಪ್ರಕರಣಗಳ ವಿಚಾರಣೆ ನಡೆಸಲು ಹೈಕೋರ್ಟ್ನಿಂದ ಸಲಹೆ ಪಡೆದು ಪ್ರತ್ಯೇಕ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ಎಂದ ಅವರು, ಇಂತಹ ಪ್ರಕರಣಗಳ ಬಗ್ಗೆ ವಾದ ಮಂಡಿಸಲು ವಿಶೇಷ ಸಾವರ್ಜನಿಕ ವಕೀಲರನ್ನು ನೇಮಕಗೊಳಿಸಿ ಹಾಗೂ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳಿಗಿಂತ ಭಯೋತ್ಪಾದನೆ ಪ್ರಕರಣಕ್ಕೆ ಆದ್ಯತೆ ಕೊಡಿ ಎಂದು ಶಿಂಧೆ ತಿಳಿಸಿದ್ದಾರೆ.
ಅಮಾಯಕ ಮುಸ್ಲೀಂ ಯುವಕರನ್ನು ಭಯೋತ್ಪಾದನೆ ಹೆಸರಲ್ಲಿ ಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈಗಾಗಲೇ ಅಮಾಯಕ ಮುಸ್ಲೀಂ ಯುವಕರನ್ನು ಬಂಧಿಸಿದ್ದರೆ, ಅವರನ್ನು ಬಿಡುಗಡೆ ಮಾಡುವುದರ ಜೊತೆಗೆ ಅವರಿಗೆ ನಷ್ಟಪರಿಹಾರ ನೀಡಬೇಕು ಎಂದು ಸೂಚಿಸಿದ್ದಾರೆ.
ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ ಕಾಯ್ದೆ ಅಡಿ 39 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಿದೆ ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಚಿವ ಕೆ.ರೆಹಮಾನ್ ಖಾನ್ ಅವರು, ಶಿಂಧೆ ಅವರಿಗೆ ಸುಳ್ಳು ಆರೋಪದ ಮೇಲೆ ಅಮಾಯಕ ಮುಸ್ಲೀಂ ಯುವಕರನ್ನು ಬಂಧಿಸಲಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಸುಶೀಲ್ ಕುಮಾರ್ ಶಿಂಧೆ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಶಿಂಧೆ ಅವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.