ಲಾಲು ಬಗ್ಗೆ 'ಕೈ' ಕಳವಳ, ಯುಪಿಎಗೆ ಮುಖಭಂಗ ಎಂದ ಬಿಜೆಪಿ
900 ಕೋಟಿ ರುಪಾಯಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ..
ಮೈಸೂರು: 900 ಕೋಟಿ ರುಪಾಯಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬಗ್ಗೆ ಸೋಮವಾರ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದರೆ, ಇದರಿಂದ ಯುಪಿಎಗೆ ಮುಖಭಂಗವಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಹೇಳಿದೆ.
ಲಾಲು ತಪ್ಪಿತಸ್ಥ ಎಂದು ರಾಂಚಿ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿರುವ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ತೀರ್ಪಿನ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಲಾಲು ಈಗಲೂ ಯುಪಿಎ ಸರ್ಕಾರದ ಅಂಗವಾಗಿದ್ದು, ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ತಾವು ನಿರ್ದೋಷಿ ಎಂದು ಸಾಬೀತು ಮಾಡಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುಪಿಎಗೆ ಮುಖಭಂಗ: ಬಿಜೆಪಿ
ಲಾಲು ವಿರುದ್ಧದ ಸಿಬಿಐ ಕೋರ್ಟ್ ತೀರ್ಪನ್ನು ಐತಿಹಾಸಿಕ ತೀರ್ಪು ಎಂದು ಕರೆದಿರುವ ಬಿಜೆಪಿ, ಈ ತೀರ್ಪಿನಿಂದ ಕೇಂದ್ರದ ಯುಪಿಎ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದು ಆರೋಪಿಸಿದೆ.
ಬಹುಕೋಟಿ ಮೇವು ಹಗರಣದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಹಾಗೂ ಜಗನ್ನಾಥ್ ಮಿಶ್ರಾ ದೋಷಿಗಳು ಎಂಬುದು ಸಾಬೀತಾಗಿದೆ. ಈ ಇಬ್ಬರೂ ಮಾಜಿ ಸಿಎಂಗಳು ಕಾಂಗ್ರೆಸ್ ಜೊತೆ ನಿಕಟ ಸಂಪರ್ಕ ಹೊಂದಿರುವುದರಿಂದ ಯುಪಿಎಗೆ ಮುಖಭಂಗವಾಗಿದೆ ಎಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಢಿ ಹೇಳಿದ್ದಾರೆ.