ನಗ್ಮಾಗೆ ಹೆಚ್ಚಿನ ಭದ್ರತೆ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ನಗ್ಮಾ..
ನವದೆಹಲಿ: ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ನಗ್ಮಾ ಅವರಿಗೆ ಹೆಚ್ಚಿನ ಭದ್ರತೆ ನೀಡಿ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ಬುಧವಾರ ಮನವಿ ಮಾಡಿದೆ.
ಚುನಾವಣಾ ಪ್ರಚಾರದ ಈ ವೇಳೆ ಜನ ಸಮೂಹ ನನ್ನೊಂದಿಗೆ ಅಸಭ್ಯವಾಗಿ ವರ್ತಿಸುವ ಘಟನೆಗಳ ನಡೆಯುತ್ತಿವೆ, ಹೀಗಾಗಿ ನನಗೆ ಭದ್ರತೆ ಅಗತ್ಯವಿದೆ ಎಂದು ಕಾಂಗ್ರೆಸ್ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಕಾಂಗ್ರೆಸ್, ಪ್ರಚಾರದ ವೇಳೆ ಜನರನ್ನು ನಿಯಂತ್ರಿಸಲು ಸ್ಥಳೀಯ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿ ಎಂಬ ಮನವಿ ಮಾಡಿದೆ.
ಈ ಹಿಂದೆ ಹಾಪುರ್‌ನ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ತೊಡಗಿದ್ದ ನಗ್ಮಾ ಅವರೊಂದಿಗೆ ಕಾಂಗ್ರೆಸ್ ಶಾಸಕ ಗಜರಾಜ್ ಶರ್ಮಾ ಅವರೇ ಅಸಭ್ಯವಾಗಿ ವರ್ತಿಸಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು.
ಮೀರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಗ್ಮಾ ಅವರು ಭಾನುವಾರ ಹಾಪುರ್ ಎಂಬಲ್ಲಿ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ತೊಡಗಿದ್ದ ವೇಳೆ ಸ್ಥಳೀಯ ಕಾಂಗ್ರೆಸ್ ಶಾಸಕರಾದ ಗಜರಾಜ್ ಶರ್ಮಾ, ನಗ್ಮಾ ಅವರ ಹೆಗಲ ಮೇಲೆ ಕೈ ಇಟ್ಟು ತಬ್ಬಿಕೊಳ್ಳಲು ಮುಂದಾಗಿದ್ದರು. ಇದರಿಂದ ಮುಜುಗರಕ್ಕೀಡಾದ ನಗ್ಮಾ ಹೆಗಲ ಮೇಲಿದ್ದ ಕೈಯನ್ನು ತೆಗೆದು ಆಕ್ರೋಶಿತರಾಗಿ ಕಾರ್ಯಕ್ರಮವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದರು.
ಕಳೆದ ಶುಕ್ರವಾರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನಗ್ಮಾರೊಂದಿಗೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ.