ನಿತೀಶ್ ಕೊಲೆ: 3 ಆರೋಪಿಗೆ ಜೀವಾವಧಿ ಶಿಕ್ಷೆ ಖಾಯಂ
ನವದೆಹಲಿ: 2002ರ ನಿತೀಶ್ ಕಟಾರಾ ಕೊಲೆ ಪ್ರಕರಣದ 3 ಆರೋಪಿಗಳಿಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಬುಧವಾರ ದೆಹಲಿ ಹೈ ಕೋರ್ಟ್ ಎತ್ತಿ ಹಿಡಿದಿದೆ.
ನಿತೀಶ್ ಕಟಾರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರತಿಗತಿ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆ ವಿರುದ್ಧ ವಿಕಾಸ್ ಯಾದವ್, ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರಾದ ಗೀತಾ ಮಿತ್ತಲ್ ಹಾಗೂ ಜೆ.ಆರ್ ಮೀದಾ ಅವರನ್ನೊಳಗೊಂಡ ವಿಭಾಗಿಯ ಪೀಠ, ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಮೂವರು ಆರೋಪಿಗಳಾದ ವಿಕಾಸ್ ಯಾದವ್, ವಿಶಾಲ್ ಯಾದವ್ ಮತ್ತು ಸುಖ್ದೇವ್ ಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿದೆ.
ಉತ್ತರ ಪ್ರದೇಶದ ರಾಜಕಾರಣಿ ಡಿ.ಪಿ ಯಾದವ್ ಅವರ ಪುತ್ರ ಆಗಿರುವ ವಿಕಾಸ್ ಯಾದವ್ ಸಹೋದರಿ ಭಾರ್ತಿ ಯಾದವ್ರನ್ನು ಕಟಾರಾ ಪ್ರೀತಿಸುತ್ತಿದ್ದರು. ಇದನ್ನು ಒಪ್ಪದಿದ್ದ ವಿಕಾಸ್, ವಿಶಾಲ್ ಯಾದವ್ ಮತ್ತು ಸುಖ್ದೇವ್ ಅವರೊಂದಿಗೆ ಸೇರಿ 2002ರಲ್ಲಿ ನಿತೀಶ್ರನ್ನು ಅಪಹರಿಸಿ ಕೊಲೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಿತೀಶ್ ಪರ ವಕೀಲರು ಇದೊಂದು 'ಮರ್ಯಾದಾ ಹತ್ಯಾ' ಎಂದು ತಮ್ಮ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹೈ ಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
ನಿತೀಶ್ ಕಟಾರಾ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಕೆಳ ನ್ಯಾಯಾಲಯ ಕಳೆದ 6 ವರ್ಷಗಳ ಹಿಂದೆಯೇ ಜೀವಾವಧಿ ಶಿಕ್ಷೆ ವಿಧಿಸಿತ್ತು.