ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೇವೇಗೌಡರ ವಿರುದ್ಧ ಹೇಳಿಕೆಗೆ ಪರಮೇಶ್ವರ ವಿಷಾದ

Vishwanath S
Updated On : 3 Apr 2014, 3:08 am

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ತಮ್ಮ ಹೇಳಿಕೆಯಿಂದ ಗೌಡರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಪರಮೇಶ್ವರ ಅವರು ನಿನ್ನೆ ದೇವೇಗೌಡರ ವಿರುದ್ಧ ಮಾತನಾಡುವ ಭರಾಟೆಯಲ್ಲಿ ದೊಡ್ಡಗೌಡರು ಈ ಹಿಂದೆ ಚುನಾವಣೆಯಲ್ಲಿ ಸೋತರೆ ವಿಷ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅವರು ವಿಷ ತೆಗೆದುಕೊಳ್ಳುತ್ತಾರೆ ಅಂತ ನಾನು ಕಾಯುತ್ತಿದ್ದೇನೆ ಎನ್ನುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ಕೂಡಲೇ ಆಕ್ರೋಶ ವ್ಯಕ್ತಪಡಿಸಿದ್ದ ದೇವೇಗೌಡರು ಇದು ಪರಮೇಶ್ವರ ಹೇಳಿಕೆ ಶುದ್ಧ ನಾನ್ಸೆನ್ಸ್ ಎಂದು ಕಿಡಿಕಾರಿದ್ದರು.

ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಪರಮೇಶ್ವರ, ನನ್ನ ಹೇಳಿಕೆಯಿಂದ ಗೌಡರಿಗೆ ನೋವಾಗಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಗೌಡರು ಹಿರಿಯರು. ಅವರು ಆರೋಗ್ಯದಿಂದ ನೂರುವರ್ಷ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು.

ದೇವೇಗೌಡರಿಗೆ ಅಪಮಾನ ಮಾಡಬೇಕು ಎಂಬ ಉದ್ದೇಶದಿಂದ ನಾನು ಹಾಗೇ ಹೇಳಿಲ್ಲ. ಗೌಡರ ಹಿಂದಿನ ಹೇಳಿಕೆಯನ್ನು ಪ್ರಸ್ತಾಪಿಸಿ ವ್ಯಂಗ್ಯವಾಗಿ ಮಾತನಾಡಿದ್ದೇ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.

ನನ್ನ ಹೇಳಿಕೆಯ ಗಂಭೀರತೆ ಮಾಧ್ಯಮಗಳಲ್ಲಿ ನೋಡಿದಾಗಲೇ ತಿಳಿದಿದ್ದು, ಮಾಧ್ಯಮಗಳು ನನ್ನ ಕಣ್ಣು ತೆರೆಸಿವೆ. ಹಿರಿಯರ ಬಗ್ಗೆ ಲಘುವಾಗಿ ಮಾತನಾಡಿ ಎಂತ ತಪ್ಪು ಮಾಡಿರುವೆ ಎಂಬುದು ನನಗೆ ಮನವರಿಕೆಯಾಗಿದೆ. ಇದಕ್ಕೆ ನಾನು ವಿಷಾದಿಸುತ್ತೇನೆ ಎಂದು ಪರಮೇಶ್ವರ ತಿಳಿಸಿದರು.

ಪರಮೇಶ್ವರ್ರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ ಮಾಧ್ಯಮಗಳಲ್ಲೂ ಸಹ ಮಾಜಿ ಪ್ರಧಾನಿ ಅವರ ವಿರುದ್ಧ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ ಎಂಬ ಕುರಿತಾಗಿ ಚರ್ಚೆಗಳು ನಡೆದಿದ್ದವು. ಇದರಿಂದ ಎಚ್ಚೆತ್ತ ಪರಮೇಶ್ವರ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement