ಮತದಾನಕ್ಕೆ ನಾಲ್ಕೆ ದಿನ ಬಾಕಿ, ಇನ್ನೂ ಬಿಡುಗಡೆಯಾಗಿಲ್ಲ ಬಿಜೆಪಿ ಪ್ರಣಾಳಿಕೆ
ಲೋಕಸಭೆ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ನಾಲ್ಕು ದಿನ ಮಾತ್ರ ಬಾಕಿ ಇದೆ. ಏಪ್ರಿಲ್ 7ರಂದು ಮುಂದಿನ ಸರ್ಕಾರದ ..
ನವದೆಹಲಿ: ಲೋಕಸಭೆ ಚುನಾವಣೆಯ ಮೊದಲನೆ ಹಂತದ ಮತದಾನಕ್ಕೆ ಇನ್ನು ಕೇವಲ ನಾಲ್ಕು ದಿನ ಮಾತ್ರ ಬಾಕಿ ಇದೆ. ಏಪ್ರಿಲ್ 7ರಂದು ಮುಂದಿನ ಸರ್ಕಾರದ ಆಯ್ಕೆಗಾಗಿ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಆದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆಯಲ್ಲಿ ತೆಲುತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಮಾತ್ರ ಇದುವರೆಗೂ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಮುಂಚೆ ಗುರುವಾರದಂದು ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಎಂದು ವರದಿಗಳು ತಿಳಿಸಿದ್ದವು. ಆದರೆ ಶನಿವಾರದವರೆಗೆ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ಸಂಬಂಧಿಸಿದಂತೆ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ತಡವಾಗುತ್ತಿದೆ ಎನ್ನಲಾಗಿದೆ.
ಈ ಮಧ್ಯೆ, ಸರಿಯಾದ ಸಮಯಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡದ ಬಿಜೆಪಿಯ ನಡೆಯನ್ನು ಪ್ರತಿಪಕ್ಷಗಳು ಪ್ರಶ್ನಿಸಿದ್ದು, 'ಮೋದಿ ಅವರನ್ನು ಒಬ್ಬ ಉತ್ತಮ ಆಡಳಿತಗಾರ ಹಾಗೂ ಸಮರ್ಥ ನಾಯಕ ಎಂದು ಪಕ್ಷ ಹೇಳಿಕೊಳ್ಳುತ್ತಿದೆ. ಆದರೆ ಅವರಿಂದ ಸರಿಯಾದ ಸಮಯಕ್ಕೆ ಒಂದು ಪ್ರಣಾಳಿಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.' ಎಂದು ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಟ್ವಿಟ್ ಮಾಡಿದ್ದಾರೆ.
ಬಿಜೆಪಿ ಇದುವರೆಗೂ ಏಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿಲ್ಲ ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.
ದೇಶದಲ್ಲಿ 9 ಹಂತಗಳಲ್ಲಿ ನಡೆಯುತ್ತಿರುವ ಈ ಮಹಾಚುನಾವಣೆ ಏಪ್ರಿಲ್ 7ರಂದು ಆರಂಭವಾಗಿ ಮೇ 12ರಂದು ಅಂತ್ಯಗೊಳ್ಳಲಿದೆ. ಅಂತಿಮವಾಗಿ ಮೇ 16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.