ಮಧುಸೂದನ್ ಮಿಸ್ತ್ರಿ ಪೊಲೀಸ್ ವಶಕ್ಕೆ
ವಡೋದರಾ: ವಡೋದರಾ ಕ್ಷೇತ್ರ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಮಧುಸೂದನ್ ಮಿಸ್ತ್ರಿಯನ್ನು ಗುಜರಾತ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಂದು ಮಿಸ್ತ್ರಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರಿ ಮೋದಿಯ ಪ್ರಚಾರ ಭಿತ್ತಿಗಳನ್ನು ಹರಿದುಹಾಕಿದರು. ಹೀಗಾಗಿ ಪೊಲೀಸರು ಮಿಸ್ತ್ರಿ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದು, ಅವರ ವಿರುದ್ಧ ಕಾನೂನುಬಾಹಿರ ಸಭೆ ಮತ್ತು ನಿಷೇಧಿತ ಆದೇಶಗಳ ಉಲ್ಲಂಘನೆ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸತೀಸ್ ಶರ್ಮಾ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಕಳೆದ ಮಾರ್ಚ್ 24ರಿಂದ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ನಗರದಾದ್ಯಂತ ಬಿಜೆಪಿಗೆ ಸೇರಿದ ಪೋಸ್ಟರ್ಗಳೆ ಹರಿದಾಡುತ್ತಿದ್ದೆ. ಇದನ್ನು ತೆರವುಗೊಳಿಸಿ ಕಾಂಗ್ರೆಸ್ನ ಪ್ರಚಾರ ಭಿತ್ತಿಗಳನ್ನು ಹಾಕಲು ಅವಕಾಶ ನೀಡಬೇಕು ಎಂದು ಕಾರ್ಯಕರ್ತರು ಪ್ರತಿಭಟಿಸುತ್ತಾ ಬಂದಿದ್ದರು.