ಮಧುಸೂದನ್ ಮಿಸ್ತ್ರಿ ಬಂಧನ, ಬಿಡುಗಡೆ
ವಡೋದರಾ: ವಡೋದರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧುಸೂದನ್ ಮಿಸ್ತ್ರಿಯನ್ನು ಗುಜರಾತ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸಾರ್ವಜನಿಕ ಆಸ್ತಿ ನಾಶ ಪಡಿಸಿದ ಆರೋಪದ ಮೇಲೆ ಮಧುಸೂದನ್ ಮಿಸ್ತ್ರಿ ಅವರನ್ನು ಗುಜರಾತ್ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿ ಸಂಜೆ ಬಿಡುಗಡೆ ಮಾಡಿದ್ದಾರೆ.
ವಡೋದರಾ ಲೋಕಸಭಾ ಕ್ಷೇತ್ರದ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಪ್ರತಿಸ್ಪರ್ಧಿಯಾಗಿರುವ ಮಧುಸೂದನ್ ಮಿಸ್ತ್ರಿ ಅವರು ಇಂದು ಬೆಳಗ್ಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರಿ ಮೋದಿಯ ಪ್ರಚಾರ ಭಿತ್ತಿಗಳನ್ನು ಹರಿದು ಹಾಕಿದರು. ಹೀಗಾಗಿ ಪೊಲೀಸರು ಮಿಸ್ತ್ರಿ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದರು.
ಕಾಂಗ್ರೆಸ್ ಕಾರ್ಯಕರ್ತರು ಕಳೆದ ಮಾರ್ಚ್ 24ರಿಂದ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ನಗರದಾದ್ಯಂತ ಬಿಜೆಪಿಗೆ ಸೇರಿದ ಪೋಸ್ಟರ್ಗಳೆ ಹರಿದಾಡುತ್ತಿದ್ದೆ. ಇದನ್ನು ತೆರವುಗೊಳಿಸಿ ಕಾಂಗ್ರೆಸ್ನ ಪ್ರಚಾರ ಭಿತ್ತಿಗಳನ್ನು ಹಾಕಲು ಅವಕಾಶ ನೀಡಬೇಕು ಎಂದು ಕಾರ್ಯಕರ್ತರು ಪ್ರತಿಭಟಿಸುತ್ತಾ ಬಂದಿದ್ದರು.