ವಿವೇಚನೆಯಿಂದ ಮಾತಾಡು: ವರುಣ್ಗೆ ಮೇನಕಾ ಗಾಂಧಿ ಕಿವಿಮಾತು
ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು...
ಪಿಲಿಭಿತ್: ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಚನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಎಂದಿರುವ ವರುಣ್ ಗಾಂಧಿ ಹೇಳಿಕೆ ಸರಿಯಲ್ಲ. ಯಾವುದೇ ಹೇಳಿಕೆ ನೀಡುವ ಮುನ್ನ ಬುದ್ದಿಯನ್ನು ಬಳಸಬೇಕೇ ಹೊರತು ಹೃದಯದ ಮಾತಲ್ಲ ಎಂದು ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ಗುರುವಾರ ಹೇಳಿದ್ದಾರೆ.
ದಾಯಾದಿ ರಾಹುಲ್ ಗಾಂಧಿಯನ್ನು ಹೊಗಳಿ ಇಕ್ಕಟ್ಟಿಗೆ ಸಿಲುಕಿಕೊಂಡ ಮಗ ವರುಣ್ ಗಾಂಧಿ ನಡೆಗೆ ಅಮ್ಮ ಮೇನಕಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದು, ನಿಜ ಹೇಳಬೇಕೆಂದರೇ, ಕಳೆದ 45 ವರ್ಷಗಳಿಂದ ಅಮೇಥಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎನ್ನವ ಮೂಲಕ ಮಗನ ಹೇಳಿಕೆಗೆ ತೆಪೆ ಅಚ್ಚಲು ಮುಂದಾಗಿದ್ದಾರೆ.
ವರುಣ್ ಗಾಂಧಿ ಅಮಾಯಕ ಹಾಗೂ ಅವನ ಹೃದಯ ಪರಿಶುದ್ಧ. ಯಾರೊ ಹೇಳಿದ ಮಾತನ್ನೇ ನಂಬಿಕೊಂಡು ಈ ರೀತಿ ಹೇಳಿದ್ದಾನೆ ಎಂದು ಮಗನನ್ನು ಮೇನಕಾ ಗಾಂಧಿ ಸಮರ್ಥಿಸಿಕೊಂಡಿದ್ದಾರೆ.
ಆತ ಅಮಾಯಕ, ಶುದ್ಧ ಹೃದಯದವನು. ಅಮೇಠಿ ಕ್ಷೇತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಅಲ್ಲಿ ಏನಾಗಿದ್ದರೂ ಒಳ್ಳೆಯದೇ ಆಗಿದೆ ಎನ್ನುವಂಥ ಉತ್ತರ ನೀಡಿದ್ದಾನೆ. ಆದರೂ ಅವನು ನೀಡಿದ ಅಭಿವೃದ್ಧಿ ವ್ಯಾಖ್ಯಾನ ಸರಿಯಿಲ್ಲ ಎಂದು ಹೇಳಿದ್ದಾರೆ.
ಉತ್ತರಪ್ರದೇಶದ ಸುಲ್ತಾನ್ಪುರದ ಬಿಜೆಪಿ ಅಭ್ಯರ್ಥಿಯಾಗಿರುವ ವರುಣ್ ಮಂಗಳವಾರ ರಾತ್ರಿ ತಮ್ಮ ಕ್ಷೇತ್ರದ ಶಿಕ್ಷಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಜತೆ ಮಾತನಾಡುತ್ತ,''ರಾಹುಲ್ ತಮ್ಮ ಕಲ್ಪನೆಯ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವುದು ಉತ್ತಮ ಕೆಲಸ.
ರಾಹುಲ್ ಅವರು ಅಮೇಠಿಯಲ್ಲಿ ಸ್ಥಾಪಿಸಿರುವಂತೆ ಸುಲ್ತಾನ್ಪುರಕ್ಕೂ ಸಣ್ಣ ಕೈಗಾರಿಕೆಗಳ ಅವಶ್ಯಕತೆಯಿದೆ. ಅವರದೇ ಜಾಡಿನಲ್ಲಿ ನಾವೂ ಸಹ ಸುಲ್ತಾನ್ಪುರವನ್ನು ಅಭಿವೃದ್ಧಿಪಡಿಸಬೇಕಿದೆ,'' ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.