ಸುಬ್ರತಾ ರಾಯ್ ಜಾಮೀನಿಗಾಗಿ ಸಹಾರ ಹೊಸ ಪ್ರಸ್ತಾವನೆ
ಹೂಡಿಕೆದಾರರಿಗೆ ಹಣ ಹಿಂತಿರುಗಿಸದ ಆರೋಪದ...
ನವದೆಹಲಿ: ಹೂಡಿಕೆದಾರರಿಗೆ ಹಣ ಹಿಂತಿರುಗಿಸದ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ಸಹಾರ ಸಂಸ್ಥೆಯ ಮುಖ್ಯಸ್ಥ ಸುಬ್ರತಾ ರಾಯ್ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದ್ದು, ರಾಯ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.
ಸುಬ್ರತಾ ರಾಯ್ಗೆ ಮಧ್ಯಂತರ ಜಾಮೀನು ನೀಡಲು 2,500 ಕೋಟಿ ಹಣ ನೀಡುವುದಾಗಿ ನ್ಯಾಯಾಲಯಕ್ಕೆ ಸಹಾರ ಸಂಸ್ಥೆ ಇಂದು ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಸಾರಾಸಗಟಾಗಿ ನಿರಾಕರಿಸಿದ ಕೋರ್ಟ್ 10 ಸಾವಿರ ಕೋಟಿ ಠೇವಣಿ ಇಡುವವರೆಗೂ ಸುಬ್ರತಾ ರಾಯ್ಗೆ ಜಾಮೀನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಂದು ಸಹಾರ ಸಂಸ್ಥೆಯ ಪರ ವಾದ ಮಂಡಿಸಿದ ವಕೀಲರು, ನಮ್ಮ ಕಕ್ಷಿದಾರರು ಎರಡೂವರೆ ಸಾವಿರ ಕೋಟಿ ಹಣವನ್ನು ತಕ್ಷಣವೇ ಠೇವಣಿಯಾಗಿ ನ್ಯಾಯಾಲಯಕ್ಕೆ ನೀಡಲಿದ್ದಾರೆ. ಅಲ್ಲದೆ 21 ದಿನಗಳ ಒಳಗಾಗಿ ಪುನಃ ಎರಡೂವರೆ ಸಾವಿರ ಕೋಟಿ ಹಣವನ್ನು ನ್ಯಾಯಾಲಯಕ್ಕೆ ಪಾವತಿಸಲಿದ್ದು, ಸುಬ್ರತಾ ರಾಯ್ರನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ವಕೀಲರ ಈ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಲು ಒಂದೇ ಬಾರಿಗೆ 5 ಸಾವಿರ ಕೋಟಿ ಹಣವನ್ನು ಠೇವಣಿಯನ್ನಾಗಿ ನೀಡುವಂತೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.
ಹೂಡಿಕೆದಾರರಿಗೆ ಹಣ ಹಿಂತಿರುಗಿಸದ ಆರೋಪದ ಮೇಲೆ ಕಳೆದ ಮಾರ್ಚ್ 4 ರಿಂದ ತಿಹಾರ್ ಜೈಲಿನಲ್ಲಿರುವ ಸುಬ್ರತಾ ರಾಯ್, ಸಹಾರ ಗ್ರೂಪ್ನ ಹೂಡಿಕೆದಾರರಿಗೆ ಸುಮಾರು 24 ಸಾವಿರ ಕೋಟಿ ಹಣ ವಂಚನೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.