ಕಾಂಗ್ರೆಸ್‌ಗೆ ಹಿರಿಯ ಸಾಹಿತಿಗಳ ಬಹಿರಂಗ ಬೆಂಬಲ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್...
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವುದಾಗಿ ಕನ್ನಡದ ಹಿರಿಯ ಸಾಹಿತಿಗಳು ಬಹಿರಂಗವಾಗಿ ಘೋಷಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದರೆ ಭಾರತದಲ್ಲಿ ಸರ್ವಾಧಿಕಾರ ಸೃಷ್ಟಿಯಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಪ್ರೊ. ಯು.ಆರ್.ಅನಂತಮೂರ್ತಿ ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ. ಗಿರೀಶ್ ಕಾರ್ನಾಡ್ ಹಾಗೂ ಡಾ.ಕೆ.ಮರುಳಸಿದ್ದಪ್ಪ ಅವರು, ನರೇಂದ್ರ ಮೋದಿ ಅವರಲ್ಲಿ ಸರ್ವಾಧಿಕಾರಿ ಧೋರಣೆ ಇದೆ. ಇತರೆ ರಾಜಕಾರಣಿಗಳು ಹಣದಿಂದ ಭ್ರಷ್ಟರಾಗಿದ್ದರೆ, ಮೋದಿ ಬೌದ್ಧಿಕವಾಗಿ ಭ್ರಷ್ಟರಾಗಿದ್ದಾರೆ. ಹೀಗಾಗಿ ತಾವು ಬಿಜೆಪಿಯನ್ನು ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು.
ಇದೇ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಗಿರೀಶ್ ಕಾರ್ನಾಡ್ ಅವರು, ಅನಂತ್ ಕುಮಾರ್ ಅವರು ಒಬ್ಬ ನಾಯಕರಾಗಿ ಚುನಾವಣಾ ಪ್ರಚಾರ ಮಾಡಬೇಕು. ಆದರೆ ಅವರು ಮೋದಿ ಜನಪ್ರಿಯತೆ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅನಂತ್ ಕುಮಾರ್ ಬೆಂಗಳೂರು ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಇವರು ಸದಾ ಉತ್ತರದ ಕಡೆ ಮುಖ ಮಾಡಿರುತ್ತಾರೆ. ಹೀಗಾಗಿ ಅವರನ್ನು ಕೆಲವರು ಉತ್ತರಕುಮಾರ ಎಂದು ಕರೆಯುತ್ತಾರೆ ಎಂದು ಕಾರ್ನಾಡ್ ವ್ಯಂಗ್ಯವಾಡಿದರು. ಅಲ್ಲದೆ ಇನ್ಫೋಸಿಸ್ ಬೆಳೆಸಿದಂತಹ ನಂದನ್ ನಿಲೇಕಣಿ ಅವರು ರಾಜಕೀಯದಲ್ಲಿ ಬೆಳೆಯಬೇಕು ಎಂದು ಕಾರ್ನಾಡ್ ಅಭಿಪ್ರಾಯ ಪಟ್ಟರು.
ಇನ್ನು ಗುಜರಾತ್‌ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಅವರು, ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿರುವ ಬೆಂಗಳೂರಿನಲ್ಲಿ ಹೊರತು, ಅಹಮದಾಬಾದ್‌ನಲ್ಲಿ ಅಲ್ಲ ಎಂದರು.
ಈ ವೇಳೆ ಪ್ರೊ.ಜಿ.ಕೆ.ಗೋವಿಂದರಾವ್, ಪ್ರೊ. ಎಸ್.ಜಿ.ಸಿದ್ದರಾಮಯ್ಯ ಹಾಗೂ ಕನ್ನಡ ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಸೇರಿದಂತೆ ಹಲವು ಸಾಹಿತಗಳು ಉಪಸ್ಥಿತಿದ್ದರು.