ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತ
ಬಿಜೆಪಿಗೆ ಮತ್ತೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂಕಟ ಎದುರಾಗಿದ್ದು, ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ವಿರುದ್ಧ ಕೋಬ್ರಾಪೋಸ್ಟ್ ..
ನವದೆಹಲಿ: ಬಿಜೆಪಿಗೆ ಮತ್ತೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂಕಟ ಎದುರಾಗಿದ್ದು, ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ವಿರುದ್ಧ ಕೋಬ್ರಾಪೋಸ್ಟ್ ಸಂಸ್ಥೆ ನಡೆಸಿದ ರಹಸ್ಯ ಕಾರ್ಯಾಚರಣೆಯ(ಸ್ಟಿಂಗ್ ಆಪರೇಷನ್) ಸಿಡಿ ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ವ್ಯವಸ್ಥಿತ ಸಂಚು ರೂಪಿಸಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಗಿದ್ದು, ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಕಾರ್ಯಾಚರಣೆಗೆ ಆರ್‌ಎಸ್‌ಎಸ್‌ನಿಂದ 'ಆಪರೇಷನ್ ಜನ್ಮಭೂಮಿ' ಎಂದು ಹೆಸರಿಡಲಾಗಿತ್ತು. ಅಲ್ಲದೆ ಮಸೀದಿ ಧ್ವಂಸಕ್ಕಾಗಿ ಎರಡು ತಿಂಗಳ ಮೊದಲೆ ಆರ್‌ಎಸ್‌ಎಸ್ ನಾಯಕರಿಂದ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿತ್ತು ಎಂಬ ಸಂಗತಿ ರಹಸ್ಯ ಕಾರ್ಯಾಚರಣೆಯಿಂದ ಬಹಿರಂಗವಾಗಿದೆ.
ಕೋಬ್ರಾ ಪೋಸ್ಟ್ ಒಟ್ಟು 23 ಜನರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿದ್ದು, ಅದರ ಸಿಡಿಯನ್ನು ಇಂದು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ. ಅಂದಿನ ಪ್ರದಾನಿ ಪಿ.ವಿ. ನರಸಿಂಹರಾವ್, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರಿಗೆ ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬ ಅಂಶ ಸ್ಟಿಂಗ್ ಆಪರೇಷನ್‌ನಿಂದ ಬಯಲಾಗಿದೆ.
ಬಿಜೆಪಿ ವಿರೋಧ
ಕೋಬ್ರಾಪೋಸ್ಟ್ ಕಾರ್ಯಾಚರಣೆಗೆ ತಿರುಗೇಟು ನೀಡಿರುವ ಬಿಜೆಪಿ, ಚುನಾವಣೆ ವೇಳೆ ಸಿಡಿ ಬಿಡುಗಡೆಯ ಹಿಂದಿನ ಉದ್ದೇಶವೇನು? ಇದು ಪ್ರಾಯೋಜಿತ ಸ್ಟಿಂಗ್. ಚುನವಾಣೆ ವೇಳೆ ಶಾಂತಿ ಕದಡುವ ಯತ್ನ ಎಂದು ಆರೋಪಿಸಿದೆ. ಅಲ್ಲದೆ ಸ್ಟಿಂಗ್ ಆಪರೇಷನ್ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ದೂರಿದೆ.
ಇನ್ನು ಸ್ಟಿಂಗ್ ಆಪರೇಷನ್ ಬಗ್ಗೆ ಪ್ರತಿಕ್ರಿಯಿಸಿರುವ ವಿಎಚ್‌ಪಿ ನಾಯಕ ಪ್ರಕಾಶ್ ಶರ್ಮಾ ಅವರು, ಸಂಘ ಪರಿವಾರದ ವಿರುದ್ಧದ ಆರೋಪ ನಿರಾಧಾರ ಎಂದಿದ್ದಾರೆ.