ಏ.14ರಂದು ಮಂಡ್ಯಕ್ಕೆ ಅಂಬಿ ಆಗಮನ
ಲೋಕಸಭೆ ಚುನಾವಣೆಗೂ ಮುನ್ನ ವಸತಿ ಸಚಿವ ಅಂಬರೀಷ್ ಆಗಮನ ಖಚಿತ
ಮಂಡ್ಯ: ಲೋಕಸಭೆ ಚುನಾವಣೆಗೂ ಮುನ್ನ ವಸತಿ ಸಚಿವ ಹಾಗೂ ಹಿರಿಯ ನಟ ಅಂಬರೀಷ್ ಅವರು ರಾಜ್ಯಕ್ಕೆ ಆಗಮಿಸುವುದು ಖಚಿತವಾಗಿದೆ.
ಸಿಂಗಾಪುರದಲ್ಲಿ ಚಿಕಿತ್ಸೆಯ ಬಳಿಕ, ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಅಂಬರೀಷ್ ಅವರು ಏಪ್ರಿಲ್ 14ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ ಎಂದು ಅವರ ಆಪ್ತ ಹಾಗೂ ಮಂಡ್ಯ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮರಾವತಿ, ಏ.14ರಂದು ಮಂಡ್ಯದಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ಅಂಬರೀಷ್ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಅಂಬರೀಷ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಮೌಂಟ್ ಎಲಿಜಬೇತ್ ಆಸ್ಪತ್ರೆ ವೈದ್ಯ ಡಾ.ಹಾಂಗ್ ಅವರಿಂದ ಇನ್ನೂ ಅನುಮತಿ ದೊರಕಿಲ್ಲ. ಶ್ವಾಸಕೋಶದ ಸೋಂಕಿನ ಚಿಕಿತ್ಸೆ ಪೂರ್ಣಗೊಂಡಿದ್ದರೂ ಅವರಿಗೆ ಇನ್ನೂ ಕೆಲಕಾಲ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಇಷ್ಟುಬೇಗ ಆಸ್ಪತ್ರೆಯಿಂದ ಬಿಡುಗಡೆ ಆಗುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
14ರಂದು ನಡೆಯುವ ಬಹಿರಂಗ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ, ನಟಿ ರಮ್ಯಾ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.