ಜಾತ್ಯಾತೀತತೆ ಹೆಸರಲ್ಲಿ ಕಾಂಗ್ರೆಸ್, ಎಸ್‌ಪಿ ಮುಸ್ಲಿಂರನ್ನು ದಾರಿ ತಪ್ಪಿಸುತ್ತಿವೆ: ಮೋದಿ
ಅಲಿಗಢ: ಜಾತ್ಯಾತೀತತೆಯ ಹೆಸರಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಮುಸ್ಲಿಂರನ್ನು ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು. ಜಾತ್ಯಾತೀತತೆಯ ಹೆಸರಲ್ಲಿ ಕಾಂಗ್ರೆಸ್ ಹಾಗೂ ಎಸ್‌ಪಿ ಒಡೆದು ಹಾಳುವ ನೀತಿ ಅನುಸರಿಸುತ್ತಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಮುಸ್ಲಿಂರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಗಲಭೆಗಳಿಗೆ ಸಾಕ್ಷಿಯಾಗಿದೆ. ಗುಜರಾತ್ ಗಲಭೆಯೊಂದನ್ನೇ ಪ್ರಶ್ನಿಸುವ ಸೋನಿಯಾಜಿ ಅವರಿಗೆ ತಮ್ಮದೆ ಸರ್ಕಾರದ ಅಧೀನದಲ್ಲಿ ಸುಮಾರು 700 ಗಲಭೆಗಳು ನಡೆದಿರುವುದು ಅವರಿಗೆ ತಿಳಿದಿಲ್ಲವೆ. ಮತ್ತೊಂದೆಡೆ ಮುಸ್ಲಿಂ ಪರ ಮಾತನಾಡುವ ನೇತಾಜಿ(ಯಾದವ್) ಅವರ ಅಧೀನದ ಉತ್ತರ ಪ್ರದೇಶದಲ್ಲೇ 250 ಗಲಭೆಗಳು ನಡೆದಿವೆ ಎಂದು ದೂರಿದರು.
ಜಾತ್ಯಾತೀತತೆಯೊಂದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿವೆ. ಅಲ್ಲದೆ ಮುಸ್ಲಿಂ ಮತಗಳನ್ನು ಕಸಿದುಕೊಳ್ಳಲು ಜಾತ್ಯಾತೀತತೆಯ ಮಂತ್ರವನ್ನು ಪಠಿಸುತ್ತಿವೆ. ಆದರೆ ಮುಸ್ಲಿಂರ ಅಭಿವೃದ್ಧಿಗಾಗಿ ಈ ಸರ್ಕಾರ ಏನು ಮಾಡಿದೆ. ಜಾತಿ ರಾಜಕಾರಣ ಮಾಡುತ್ತಾ ಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡದೆ ಎಲ್ಲಾ ವರ್ಗದವರನ್ನು ಕಳಪೆ ಮಾಡುತ್ತಿದೆ ಎಂದರು.
ದೇಶದ ಅಭಿವೃದ್ಧಿ ಹಾಗೂ ಜನತೆಗೆ ಭದ್ರತೆ ಒದಗಿಸದ ಈ ಎರಡು ಸರ್ಕಾರಗಳು ಅಧಿಕಾರ ನಡೆಸುವ ಯೋಗ್ಯತೆ ಇಲ್ಲ ಎಂದ ಮೋದಿ, ಬಿಜೆಪಿಯೇತ್ತರ ಸರ್ಕಾರ ನಡೆಸುತ್ತಿರುವ ರಾಜ್ಯಗಳ ಮುಸ್ಲಿಂರ ಪರಿಸ್ಥಿತಿಗಿಂತ ಗುಜರಾತ್ ಮುಸ್ಲಿಂರ ಪರಿಸ್ಥಿತಿ ಎಷ್ಟೋ ಉತ್ತಮವಾಗಿದೆ ಎಂದು ಮೋದಿ ತಿಳಿಸಿದರು.