ಕಾಂಗ್ರೆಸ್ ಸರ್ಕಾರ ರೈತ ವಿರೋಧಿ: ಮೋದಿ
ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ...
ಕೊಪ್ಪಳ: ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ರೈತರಿಗೆ ಯಾವುದೇ ಸವಲತ್ತುಗಳನ್ನು ನೀಡದೆ ರೈತರಿಗೆ ಅನ್ಯಾಯ ಮಾಡಿದೆ ಎಂದು ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಭ್ರಮನಿರಸನವಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಬರಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಗಂಭೀರ ಆರೋಪ ಮಾಡಿದರು.
ದೇಶದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ನಾನು ನೋಡಿಲ್ಲ. ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಹಗರಣಗಳಾದ 2 ಜಿ, ಕಲ್ಲಿದ್ದಲು ಹಗರಣಗಳಲ್ಲಿ ಕಾಂಗ್ರೆಸ್ ಕೋಟಿ ಕೋಟಿ ಲೂಟಿ ಮಾಡುತ್ತಾ ಬಂದಿದೆ. ಇಂತಹ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಕಾಂಗ್ರೆಸ್ ಗೆ ಕೋಪ ಬರುತ್ತದೆ ಎಂದು ಲೇವಡಿ ಮಾಡಿದರು.
ಆರ್‌ಟಿಐ ಜಾರಿಯೊಂದನ್ನೇ ದೊಡ್ಡ ಸಾಧನೆಯೆಂದು ಯುಪಿಎ ಸರ್ಕಾರ ಹೇಳಿಕೊಳ್ಳುತ್ತಿದೆ. ಆರ್‌ಟಿಐ ಜಾರಿಯಿಂದ ಬಡವರ ಕಷ್ಟ ಕಾರ್ಪಣ್ಯ ನೀಗಿಸಲು ಸಾಧ್ಯವಾ? ಅಥವಾ ಆರ್‌ಟಿಐ ಮೂಲಕ ವಿದೇಶದಿಂದ ಕಪ್ಪುಹಣವನ್ನು ವಾಪಸ್ ತರಲು ಸಾಧ್ಯನಾ ಎಂದು ಮೋದಿ ಪ್ರಶ್ನಿಸಿದರು. ಯುಪಿಎ ಸರ್ಕಾರದ ಭಷ್ಟಾಚಾರದ ವಿರುದ್ಧ ದೇಶದ ಜನರು ಎಚ್ಚೆತ್ತುಗೊಂಡಿದ್ದಾರೆ. ಈ ಸಲ ಬಿಜೆಪಿ ಪರವಾಗಿ ಮತ ಚಲಾಯಿಸುವುದರೊಂದಿಗೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರಕ್ಕೆ ಅಂಗವೈಕಲ್ಯ
ರಾಜ್ಯ ಸರ್ಕಾರಕ್ಕೆ ಕಿವಿ ಕೇಳಲ್ಲ, ಕಣ್ಣು ಕಾಣಲ್ಲ, ಮಾತು ಬರಲ್ಲ, ಕೇವಲ ಹೈಕಮಾಂಡ್‌ನ ಆದೇಶವೊಂದನ್ನು ಮೂಕ ಪ್ರಾಣಿಗಳಂತೆ ಪಾಲಿಸುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ವ್ಯಂಗ್ಯವಾಡಿದರು.