7 ಅಧಿಕಾರಿಗಳ ವರ್ಗಾವಣೆ ಮಾಡಿದ ಪ. ಬಂಗಾಳ ಸರ್ಕಾರ
ಕೊಲ್ಕತಾ: ಕೇಂದ್ರ ಚುನಾವಣಾ ಆಯೋಗ ಆದೇಶಕ್ಕೆ ಮಣಿದಿರುವ ಪಶ್ಚಿಮ ಬಂಗಾಳ ಸರ್ಕಾರ 7 ಉನ್ನತ ಮಟ್ಟದ ಅಧಿಕಾರಿಗಳನ್ನು ಬುಧವಾರ ವರ್ಗಾವಣೆ ಮಾಡಿದೆ.
ಚುನಾವಣಾ ಆಯೋಗ ಆದೇಶದಂತೆ ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಗ ಜಾಗಕ್ಕೆ ಬೇರೆಯವರನ್ನು ವರ್ಗ ಮಾಡಲಾಗಿದ್ದು, 7 ಅಧಿಕಾರಿಗಳ ವರ್ಗಾವಣೆಯ ಪತ್ರವನ್ನು ಚುನಾವಣಾ ಆಯೋಗಕ್ಕೂ ಕಳಿಸಿಕೊಡಲಾಗಿದೆ ಎಂದು ಗೃಹ ಕಾರ್ಯದರ್ಶಿ ಬಸುದೇಬ್ ಬ್ಯಾನರ್ಜಿ ಅವರು ತಿಳಿಸಿದ್ದಾರೆ.
ಬುಧವಾರ 10 ಗಂಟೆಯೊಳಗಾಗಿ ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ರಾಜ್ಯ ಮುಖ್ಯ ಕಾರ್ಯದರ್ಶಿ ಸಂಜಯ್ ಮಿತ್ರ ಅವರಿಗೆ ಆದೇಶಿಸಿತ್ತು. ಅದರಂತೆ ಇಂದು ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ನಿನ್ನೆಯಷ್ಟೆ ಚುನಾವಣಾ ಆಯೋಗ ಐವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಓರ್ವ ಜಿಲ್ಲಾಧಿಕಾರಿ ಸೇರಿದಂತೆ 8 ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಆದೇಶಿಸಿತ್ತು. ಆದರೆ ಆಯೋಗದ ಆದೇಶವನ್ನು ತಳ್ಳಿಹಾಕಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾವು ಯಾವುದೇ ಕಾರಣಕ್ಕೂ ಅಧಿಕಾರಿಗಳ ವರ್ಗಾವಣೆ ಮಾಡುವುದಿಲ್ಲ ಮತ್ತು ಈ ಸಂಬಂಧ ತಾವು ಜೈಲಿಗೆ ಹೋಗಲು ಸಿದ್ಧ ಎಂದಿದ್ದರು.
ಮಮತಾ ಅವರ ಈ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಆಯೋಗ, ಒಂದು ವೇಳೆ ಪಶ್ಚಿಮ ಬಂಗಾಳ ಸರ್ಕಾರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ್ದೇಯಾದರೆ, ಸಂಬಂಧಿಸಿದ ಜಿಲ್ಲೆಗಳಲ್ಲಿ ಚುನಾವಣೆಯನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿತ್ತು.