ವಡೋದರಾದಿಂದ ಮೋದಿ ನಾಮಪತ್ರ
ಗುಜರಾತ್‌ನ ವಡೋದರಾದಿಂದ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸುತ್ತಿರುವ ಬಿಜೆಪಿ..
ವಡೋದರಾ: ಗುಜರಾತ್‌ನ ವಡೋದರಾದಿಂದ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮೋದಿ ಜಿಲ್ಲಾಧಿಕಾರಿ ಕಚೇರಿವರಗೆ ರೋಡ್ ಶೋ ನಡೆಸಿದರು. ತಮ್ಮ ಆಪ್ತ ಬೆಂಬಲಿಗರೊಂದಿಗೆ ಮೋದಿ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಚಹಾ ಮಾರಾಟಗಾರ ಕಿರಣ್ ಮಹಿದಾ ಸಹ ಉಪಸ್ಥಿತರಿದ್ದರು.
ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ವಡೋದರಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಗುಜರಾತ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿದ್ದು, ಏಪ್ರಿಲ್ 30ರಂದು ಮತದಾನ ನಡೆಯಲಿದೆ.
ವಡೋದರಾ ನನ್ನ 'ಕರ್ಮಭೂಮಿ': ಮೋದಿ
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಪಕ್ಷದ ನಾಯಕರಿಗೆ ಮತ್ತು ತಮ್ಮ ಸಾವಿರಾರು ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ವಡೋದರಾ ನನ್ನ 'ಕರ್ಮಭೂಮಿ'ಯಾಗಿದ್ದು, ವಡೋದರಾ ಜನತೆಗೆ ತಾನು ಆಭಾರಿಯಾಗಿರುವುದಾಗಿ ಹೇಳಿದರು.
ವಡೋದರಾದಲ್ಲಿ ಬಿಜೆಪಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಅಭಿವೃದ್ಧಿಯನ್ನು ನೋಡಿ ವಡೋದರಾ ಜನತೆ ತಮ್ಮನ್ನು ಆರ್ಶೀವದಿಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.