ಸಿ.ಕೆ. ಜಾಫರ್ ಷರೀಫ್ ಅಸ್ವಸ್ಥ: ವಿಕ್ರಂ ಆಸ್ಪತ್ರೆಗೆ ದಾಖಲು
ಬೆಂಗಳೂರು: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಕೇಂದ್ರ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರನ್ನು ಬುಧವಾರ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜಾಫರ್ ಷರೀಫ್ರನ್ನು ಇಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಕೂಡಲೇ ಅವರಿಗೆ ವಿಕ್ರಂ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ವೈದ್ಯರ ಚಿಕಿತ್ಸೆಯ ನಂತರ ಷರೀಫ್ರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಷರೀಫ್ರಿಗೆ ಕಾಂಗ್ರೆಸ್ ಟಿಕೆಟ್ ಸಿಗದೆ ತೀವ್ರ ಹತಾಶರಾಗಿದ್ದರು. ಟಿಕೆಟ್ ಸಿಗದೆ ಮನನೊಂದು ನಿನ್ನೆಯಷ್ಟೇ ಕಾಂಗ್ರೆಸ್ಗೆ ರಾಜಿನಾಮೆ ಸಲ್ಲಿಸಿದ್ದರು.
ಇತ್ತೀಚೆಗೆ ನಡೆದ ರಾಜಕೀಯ ಜಂಜಾಟದಿಂದಾಗಿ ತೀವ್ರವಾಗಿ ನೊಂದಿದ್ದ ಅವರು, ಮಾನಸಿಕ ಹಾಗೂ ದೈಹಿಕವಾಗಿ ತುಂಬ ಬಳಲುತ್ತಿದ್ದಂತೆ ಕಾಣುತ್ತಿದ್ದರು. ಇಂದು ಮಧ್ಯಾಹ್ನ ಉಸಿರಾಟ ತೊಂದರೆ ಹೆಚ್ಚಾಗಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.