ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ಮುಲಾಯಂ ವಿರೋಧ
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾಕೆ? ಯುವಕರು ತಪ್ಪು ಮಾಡುವುದು ಸಹಜ ಅದಕ್ಕೆ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕಾ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ...
ಮುರಾದಾಬಾದ್: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾಕೆ? ಯುವಕರು ತಪ್ಪು ಮಾಡುವುದು ಸಹಜ ಅದಕ್ಕೆ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕಾ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಗುರುವಾರ ಅಘಾತಕಾರಿ ಹೇಳಿಕೆ ನೀಡಿದ್ದಾರೆ.
ಮುರಾದಾಬಾದ್‌ನಲ್ಲಿ ಎಸ್‌ಪಿ ಚುನಾವಣಾ ಪ್ರಚಾರ ರ್ಯಾಲಿ ವೇಳೆ ಮಾತನಾಡಿದ ಮುಲಾಯಂ, ಅತ್ಯಾಚಾರಿಗಳ ಪರ ಬ್ಯಾಟ್ ಬೀಸಿದರು. ಅತ್ಯಾಚಾರ ಮಾಡಿದ ಯುವಕರಿಗೆ ಗಲ್ಲು ಶಿಕ್ಷೆ ವಿಧಿಸಬಾರದು. ಆಕಸ್ಮಿಕವಾಗಿಯೂ ಅತ್ಯಾಚಾರಗಳು ನಡೆಯುತ್ತವೆ. ಯುವಕರು ತಪ್ಪು ಮಾಡುವುದು ಸಹಜ ಅದಕ್ಕೆ ಮರಣ ದಂಡನೆಯಂತ ಘೋರ ಶಿಕ್ಷೆ ವಿಧಿಸಬೇಕ ಎಂದರು.
ಮುಂಬೈನ ಶಕ್ತಿ ಮಿಲ್ಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನೂತನ ಅತ್ಯಾಚಾರ ಕಾಯ್ದೆಯಡಿ ಮೂವರು ಅಪರಾಧಿಗಳಿಗೆ ಮುಂಬೈ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣಗಳಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ನೀಡಬಾರದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅತ್ಯಾಚಾರ ಮತ್ತು ವರದಕ್ಷಿಣೆ ಕಾಯ್ದೆಯನ್ನೇ ಬದಲಿಸುತ್ತೇವೆ ಎಂದರು.
ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವುದರ ಮೂಲಕ ಕಾನೂನು ದುರಪಯೋಗವಾಗುತ್ತಿದೆ. ಈ ಕಾನೂನನ್ನು ಹೆಣ್ಣುಮಕ್ಕಳು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕಾನೂನು ದುರಪಯೋಗ ತಡೆಯುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಎಸ್‌ಪಿ ಹೊಸ ಅತ್ಯಾಚಾರ ಕಾಯ್ದೆಯನ್ನು ಬದಲಾಯಿಸಲಿದೆ ಎಂದು ಮುಲಾಯಂ ಹೇಳಿದ್ದಾರೆ.
ಮುಲಾಯಂ ಸಿಂಗ್ ಹೇಳಿಕೆಗೆ ದೇಶವ್ಯಾಪಿ ವಿರೋಧ ವ್ಯಕ್ತವಾಗಿದೆ. ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಿಳಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.