ತಾಯಿ, ಸಹೋದರನ ಪರ ಮಾತ್ರ ಪ್ರಚಾರ: ಪ್ರಿಯಾಂಕಾ ಗಾಂಧಿ
ತಮ್ಮ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಹೋದರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ..
ನವದೆಹಲಿ: ತಮ್ಮ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಹೋದರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪರ ಮಾತ್ರ ತಾವು ಚುನಾವಣಾ ಪ್ರಚಾರ ಮಾಡುವುದಾಗಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ತಮ್ಮ ಪತಿ ರಾಬರ್ಟ್ ವಾದ್ರಾ ಅವರೊಂದಿಗೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ತಮ್ಮ ಪರ ಪ್ರಚಾರಕ್ಕೆ ಬರುವಂತೆ ಇತರೆ ಕಾಂಗ್ರೆಸ್ ನಾಯಕರು ಕೇಳಿಕೊಂಡಿದ್ದಾರೆ. ಆದರೆ ನಾನು ನನ್ನ ತಾಯಿ ಮತ್ತು ಸಹೋದರನ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
ಉತ್ತರ ಪ್ರದೇಶದ ರಾಯ್‌ಬರೆಲಿ ಮತ್ತು ಅಮೇಠಿಯಲ್ಲಿ ಪ್ರಿಯಾಂಕಾ ಪ್ರಚಾರ ಕೈಗೊಂಡ ಬೆನ್ನಲ್ಲೆ, ತಮ್ಮ ಕ್ಷೇತ್ರಗಳಲ್ಲೂ ಪ್ರಚಾರ ಕೈಗೊಳ್ಳುವಂತೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಪ್ರಿಯಾಂಕಾಗೆ ಮನವಿ ಮಾಡಿದ್ದರು. ಪ್ರಿಯಾಂಕಾ ಅವರು ತಮಗೆ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿರುವುದಾಗಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಹೇಳಿದ್ದರು. ಅಲ್ಲದೆ ವಡೋದರಾದಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿರುವ ಮಧುಸುದನ್ ಮಿಸ್ತ್ರಿ ಸಹ ಪ್ರಿಯಾಂಕಾ ಪ್ರಚಾರಕ್ಕೆ ಬಂದರೆ ತಾವು ಅವರಿಗೆ ಆಭಾರಿಯಾಗುವುದಾಗಿ ಹೇಳಿದ್ದರು.
ಇದೇ ವೇಳೆ ದೇಶದಲ್ಲಿ ಮೋದಿ ಅಲ್ಲೆ ಇಲ್ಲ ಎಂದು ಪ್ರಿಯಾಂಕಾ ಗಾಂಧಿ ಅವರು ಹೇಳಿದರು.