ಮೋದಿ ವಿರುದ್ಧ ಕಾಂಗ್ರೆಸ್ಸೀಗರ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ನ..
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ನ ಪ್ರಮುಖ ನಾಯಕರು ಈ ವೇಳೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೋದಿ ಒಬ್ಬ ಸರ್ವಾಧಿಕಾರಿ, ಸುಳ್ಳುಗಾರ ಎಂಬ ದೂರಿದ್ದಾರೆ.
ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿರುವ ಕೇಂದ್ರ ಸಚಿವ ರೆಹಮಾನ್ ಖಾನ್, ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ ಒಂದು ವೇಳೆ ಮೋದಿ ಪ್ರಧಾನಿ ಆದರೆ ಅದು ದೇಶಕ್ಕೆ ಕಳಂಕ ಎಂದು ಹೇಳಿದರು.
ಗುಜರಾತ್ನಲ್ಲಿ ನಡೆದ ಗೋಧ್ರಾ ನರಮೇಧದಲ್ಲಿ 3 ಸಾವಿರ ಜನ ಹತ್ಯೆಯಾದಾಗಲು ಮೋದಿ ಅದರ ನೈತಿಕ ಹೊಣೆ ಹೊರಲಿಲ್ಲ. ತಮ್ಮದೇನು ತಪ್ಪುಇಲ್ಲವೆಂಬತೆ ಸುಮ್ಮನಿದ್ದರು. ಆ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್ಡಿಎ ಸರ್ಕಾರ ಸಹ ಮೋದಿಯನ್ನು ಪದಚ್ಯುತಿಗೊಳಿಸಲಿಲ್ಲ. ಆದರೆ ಇಂದು ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ ಎಂದು ಆರೋಪಿಸಿದರು.
ಗುಜರಾತ್ ಹೆಚ್ಚು ಅಭಿವೃದ್ಧಿ ಹೊಂದಿದೆ ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಗುಜರಾತ್ನಲ್ಲಿ ಬಿಜೆಪಿ ಸರ್ಕಾರಕ್ಕೂ ಮುನ್ನ ಕಾಂಗ್ರೆಸ್ ಸರ್ಕಾರದವಧಿಯಲ್ಲಿ ಹೆಚ್ಚು ಅಭಿವೃದ್ಧಿಯಾಗಿತ್ತು. ಆದರೆ ಮೋದಿ ತಾವೇ ಅಭಿವೃದ್ಧಿ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಮೋದಿ ಇಲ್ಲದಿದ್ದರೂ ದೇಶದಲ್ಲಿ ಕೈಗಾರಿಕಾ ಅಭಿವೃದ್ದಿಯಾಗುತ್ತೆ ಎಂದರು.
ಮೋದಿ ಒಬ್ಬ ಸರ್ವಾಧಿಕಾರಿ: ಎಸ್.ಎಂ. ಕೃಷ್ಣ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಗುರುವಾರ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕೃಷ್ಣ, ಬಿಜೆಪಿ ಪ್ರಧಾನಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಒಬ್ಬ ಸರ್ವಾಧಿಕಾರಿ ಅವರು ಪ್ರಧಾನಿ ಹುದ್ದೆಗೆ ಏರಿದರೆ ದೇಶಕ್ಕೆ ಅಪಾಯ ಕಂಡಿತ. ಮೋದಿ ಒಬ್ಬ ಸರ್ವಾಧಿಕಾರಿ ಅವರ ಕೈಯಲ್ಲಿ ಅಣ್ವಸ್ತ್ರದ ಕೀ ಕೊಟ್ಟರೆ ಸರ್ವನಾಶ ಕಂಡಿತ. ಹೀಗಾಗಿ ದೇಶದ ಭದ್ರತೆ ಮತ್ತು ದೇಶವನ್ನು ಸಮರ್ಥವಾಗಿ ಕಾಪಾಡುವ ಯೋಗ್ಯರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಬೇಕು ಎಂದು ಕೃಷ್ಣ ಹೇಳಿದರು.
ಮೋದಿ ಸುಳ್ಳುಗಾರ: ಸಿದ್ದು
ಮೋದಿ ಒಬ್ಬ ಸುಳ್ಳುಗಾರ ಇಷ್ಟು ದಿನ ತಾನು ಬ್ರಹ್ಮಚಾರಿ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಹೀಗ ಸತ್ಯ ಬಹಿರಂಗವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಸಿದ್ದರಾಮಯ್ಯ, ಮೋದಿ ಒಬ್ಬ ಸುಳ್ಳುಗಾರ ಎಂದು ಕಿಡಿಕಾರಿದ್ದಾರೆ. ಮೋದಿ ಪತ್ನಿ ಇರೋದನ್ನ ಮುಚ್ಚಿಟ್ಟಿದ್ದು ಅದು ಕಾನೂನು ಪ್ರಕಾರ ಅಪರಾಧ ಹೀಗಾಗಿ ನರೇಂದ್ರ ಮೋದಿಗೆ ಪ್ರಧಾನಿ ಆಗುವ ಅರ್ಹತೆ ಇಲ್ಲ ಅವರಿಗೆ ಕಾನೂನಿನ ಪ್ರಕಾರ 6 ತಿಂಗಳ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.