ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅತ್ಯಾಚಾರ ಮಹಿಳೆಗೂ ಶಿಕ್ಷೆಯಾಗಬೇಕು: ಅಬು ಅಜ್ಮಿ

Vishwanath S
Updated On : 11 Apr 2014, 2:41 am

ಮುಂಬೈ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾಕೆ? ಎಂಬ ಅಘಾತಕಾರಿ ಹೇಳಿಕೆ ನೀಡಿದ್ದ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್‌ರ ಹೇಳಿಕೆಯನ್ನು ಮತ್ತೋರ್ವ ಎಸ್‌ಪಿ ಮುಖಂಡ ಅಬು ಅಜ್ಮಿ ಶುಕ್ರವಾರ ಸಮರ್ಥಿಸಿಕೊಂಡಿದ್ದು, ಅತ್ಯಾಚಾರ ಮಹಿಳೆಗೂ ಸಹ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣಗಳಲ್ಲಿ ಯುವಕರಂತೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೂ ಶಿಕ್ಷೆಯಾಗಬೇಕು ಎಂದು ಅಬು ಅಜ್ಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರತಿಯೊಂದು ಅತ್ಯಾಚಾರ ಪ್ರಕರಣದಲೂ ಪುರುಷರಿಗೆ ಮಾತ್ರ ಶಿಕ್ಷೆಯಾಗುತ್ತಿದೆ ಆದರೆ ಮಹಿಳೆಯರಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ ಇದು ಅನ್ಯಾಯ ಎಂದರು.

ಇಸ್ಲಾಂನ ಕಾನೂನಿನಲ್ಲಿ ಮಹಿಳೆಯರು ತಪ್ಪೆಸಗಿದರೆ ಅವರಿಗೂ ಶಿಕ್ಷೆ ವಿಧಿಸುತ್ತಾರೆ. ಆದರೆ ಇಲ್ಲಿ ಮಾತ್ರ ಪುರುಷರಿಗೆ ಮಾತ್ರ ಶಿಕ್ಷೆಯಾಗುತ್ತಿದ್ದು, ಅತ್ಯಾಚಾರ ತಡೆ ಕಾನೂನಿಗೆ ಹೊಸದಾಗಿ ತಿದ್ದುಪಡಿಯಾದ ನಂತರವಂತೂ ಸುಮ್ಮನೆ ಮುಟ್ಟಿದರೂ ಸಾಕು ಹುಡುಗಿಯರು ಅತ್ಯಾಚಾರ ಮಾಡಿಬಿಟ್ಟ ಎಂಬ ಹಲವು ಪ್ರಕರಣಗಳು ದಾಖಲಾಗುತ್ತಿವೆ ಎಂದರು.

ಯಾವುದೇ ಮಹಿಳೆಯಾಗಿರಲಿ ಆಕೆ ವಿವಾಹಿತೆ ಆಗಿರಲಿ ಅಥವಾ ಅವಿವಾಹಿತೆಯೇ ಆಗಿರಲಿ ಒಪ್ಪಂದದ ಮೇರೆಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದರೆ ಆಕೆಗೆ ಮತ್ತು ಆತನಿಗೆ ಇಬ್ಬರಿಗೂ ಕಠಿಣ ಶಿಕ್ಷೆಯಾಗಿಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಮುಗ್ಧ ಯುವಕರು ಬಲಿಪಶುವಾಗುತ್ತಿದ್ದು, ಅವರ ಜೀವನ ಹಾಳಾಗುತ್ತಿದೆ. ಆದರೆ ಇಸ್ಲಾಂ ಕಾನೂನಿನಲ್ಲಿ ಹಾಗಲ್ಲ. ಆ ವಿಷಯದಲ್ಲಿ ತಪ್ಪು ಮಾಡಿದರೆ ಮಹಿಳೆಯರಿಗೂ ಕಠಿಣ ಶಿಕ್ಷೆಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಬು ಹೇಳಿಕೆಗೆ ಮುಂಬೈನ ಉತ್ತರ ಕೇಂದ್ರದಿಂದ ಲೋಕಸಭಾ ಕ್ಷೇತ್ರದಿಂದ ಸ್ಪಧಿಸುತ್ತಿರುವ ಅವರ ಪುತ್ರ ಫರ್ಜಾನ್ ಅಜ್ಮಿ ತಿರುಗೇಟು ನೀಡಿದ್ದು, ನಾನು ಈ ವಾದವನ್ನು ಒಪ್ಪುವುದಿಲ್ಲ. ನನಗೂ ಐವರು ಸೋದರಿಯರಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ಕಿರುಕುಳವಾದರೆ ಅಥವಾ ಅತ್ಯಾಚಾರವಾದರೆ ಅದರಿಂದಾಗಿ ಅವರು ಎದುರಿಸುವ ಹಿಂಸೆ, ಅವಮಾನ ಅವರನ್ನು ಜೀವಂತಶವವಾಗಿಸುತ್ತದೆ. ಹೀಗಾಗಿ ಅತ್ಯಾಚಾರಿಗಳಿಗೆ ಒಂದು ಬಾರಿಯಲ್ಲ ನೂರು ಬಾರಿ ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.

ನಿನ್ನೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಚುನಾವಣಾ ಪ್ರಚಾರದ ವೇಳೆ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾಕೆ? ಆಕಸ್ಮಿಕವಾಗಿಯೂ ಅತ್ಯಾಚಾರಗಳು ಸಂಭವಿಸುತ್ತವೆ. ಹೀಗಾಗಿ ಸಣ್ಣ ತಪ್ಪಿಗೆ ಯುವಕರಿಗೆ ಗಲ್ಲು ಶಿಕ್ಷೆಯೆಂಬ ಘೋರ ಶಿಕ್ಷೆ ವಿಧಿಸಬೇಕ ಎಂದಿದ್ದರು. ಅಲ್ಲದೆ ಎಸ್‌ಪಿ ಅಧಿಕಾರಕ್ಕೆ ಬಂದರೆ ಹೊಸ ಅತ್ಯಾಚಾರ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳಿದ್ದರು. ಈ ಹೇಳಿಕೆಗೆ ದೇಶವ್ಯಾಪ್ತಿ ಖಂಡನೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement