ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ: ಅಂಬರೀಷ್

ನಾನು ಮತ್ತೆ ಇಲ್ಲಿಗೆ ಬಂದು ನಿಮ್ಮನ್ನು ನೋಡುತ್ತಿರುವುದು ನನ್ನ ಅದೃಷ್ಟ. ವಾಪಸ್ ಬಂದಿರುವುದಕ್ಕೆ ಸಂತಸವಾಗಿದೆ ..

Lingaraj Badiger
Updated On : 11 Apr 2014, 5:16 am

ಬೆಂಗಳೂರು: ನಾನು ಮತ್ತೆ ಇಲ್ಲಿಗೆ ಬಂದು ನಿಮ್ಮನ್ನು ನೋಡುತ್ತಿರುವುದು ನನ್ನ ಅದೃಷ್ಟ. ವಾಪಸ್ ಬಂದಿರುವುದಕ್ಕೆ ಸಂತಸವಾಗಿದೆ ಎಂದು ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಶುಕ್ರವಾರ ಹೇಳಿದ್ದಾರೆ.

ಚಿಕಿತ್ಸೆಯ ಬಳಿಕ ಇಂದು ಮೊದಲ ಬಾರಿಗೆ ನಗರದ ಅಶೋಕ ಹೋಟೆಲ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅಂಬಿ, ಜನರ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ. ಕರ್ನಾಟಕದ ಜನರೇ ನನಗೆ ದೊಡ್ಡ ಆಸ್ತಿ ಮತ್ತು ಅವರು ನನ್ನ ಮೇಲೆ ಇಟ್ಟಿರುವ ವಿಶ್ವಾಸವೇ ನನ್ನ ಯಶಸ್ವಿಗೆ ಕಾರಣ ಎಂದು ಹೇಳಿದರು.

ನಾನು ಗುಣಮುಖನಾಗಲಿ ಎಂದು ಅನೇಕರು ಪ್ರಾರ್ಥಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ನನ್ನನ್ನು ಸಿಂಗಾಪುರಕ್ಕೆ ಕರೆದೊಯ್ಯಲು ಸಲಹೆ ನೀಡಿದ್ದರು. ಅಲ್ಲದೆ ನನ್ನ ಮೇಲಿನ ಅಭಿಮಾನದಿಂದ ನನ್ನ ಆರೋಗ್ಯ ವಿಚಾರಿಸಲು ಅನೇಕರು ಸಿಂಗಾಪುರಕ್ಕೆ ಸಹ ಬಂದಿದ್ದರು ಎಂದು ಅಂಬರೀಷ್ ತಿಳಿಸಿದರು. ಇದೇ ವೇಳೆ ತಮಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಸಿಂಗಾಪುರ ವೈದ್ಯರನ್ನು ಅಂಬರೀಷ್ ಶ್ಲಾಘಿಸಿದರು.

ಸಂಸದನಾಗಿ, ಶಾಸಕನಾಗಿ, ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಕಾವೇರಿ ವಿಚಾರವಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟೆ. ಈಗ ರಾಜ್ಯದಲ್ಲಿ ವಸತಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನು ಖಳನಾಯಕನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ, ನಾಯಕನಾಗಿ, ಪೋಷಕ ನಟನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ಈ ಎಲ್ಲ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಪತ್ನಿ ಸುಮಲತಾ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಅಂಬಿ, ಅವಳು ನನ್ನ ಅಭಿಮಾನಿಗಳಿಗೆ ಕೊಟ್ಟ ಮಾತಿನಂತೆ, ಮತ್ತೆ ನನ್ನನ್ನು ರೆಬೆಲ್‌ಸ್ಟಾರ್ ಆಗಿಯೇ ಕರೆತಂದಿದ್ದಾಳೆ ಎಂದು ಹೇಳಿದರು.

ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ
ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಹೀಗಾಗಿ ಮಂಡ್ಯದಲ್ಲಿ ನಾನು ರಮ್ಯಾ ಪರವಾಗಿ ಪ್ರಚಾರ ಮಾಡುತ್ತೇನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವನಾಗಿ ಅವಳ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಅಂಬರೀಷ್ ಹೇಳಿದ್ದಾರೆ.

ಗೃಹ ಸಚಿವ ಕೆ.ಜೆ.ಜಾರ್ಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement