ಮತ್ತೆ ಚೋರ್ ಬಾಬುಲಾಲ್ ಮನೆ ಮೇಲೆ ದಾಳಿ
ಬಳ್ಳಾರಿ: ನಿನ್ನೆಯಷ್ಟೇ ಬಾಬುಲಾಲ್ ಪರಶುರಾಮ್ ಪುರಿ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಕೋಟಿಗಟ್ಟಲೆ ಹಣ ವಶಪಡಿಸಿಕೊಂಡ ಬೆನ್ನಲೇ, ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆ ಬಾಬುಲಾಲ್ ಪರಶುರಾಮ್ ಪುರಿ ಅವರ ಮನೆ, ಕಚೇರಿ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಸುಮಾರು 8.77 ಕೋಟಿ ರುಪಾಯಿ ವಶಪಡಿಸಿಕೊಂಡಿದ್ದರು.
ಆದಾಯ ಇಲಾಖೆಯ ಅಧಿಕಾರಿಗಳು ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅವರೊಂದಿಗೆ ಬಾಬುಲಾಲ್ ವಾಗ್ದಾಳಿ ನಡೆಸಿದರು. ಆನಂತರ ಸ್ಥಳಕ್ಕೆ ಆಗಮಿಸಿದ ಉಪ ಆಯುಕ್ತ ಅನಿರುದ್ಧ ಅವರು ಬಾಬುಲಾಲ್ಗೆ ಅಧಿಕಾರಿಗಳಿಗೆ ಸಹಕರಿಸುವಂತೆ ತಿಳಿಸಿದರು.
ಚುನಾವಣೆಯಲ್ಲಿ ಹವಾಲಾ ಹಣ ಸರಬರಾಜಾಗುತ್ತಿರುವ ಸುಳಿವಿನ ಮೇಲೆ ನಿನ್ನೆ ಬಳ್ಳಾರಿ ಗಣಿಧಣಿಗಳಿಗೇ ಸಾಲ ನೀಡುತ್ತಿದ್ದ ಫೈನಾನ್ಯಿಯರ್ ಬಾಬುಲಾಲ್ರ ಮನೆ, ಕಚೇರಿ ಹಾಗೂ ಮಗನ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು 8.77 ಕೋಟಿ ನಗದು, ಅಲ್ಲದೆ 4.3 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರ, 5 ಕೋಟಿ ಮೌಲ್ಯದ ಚೆಕ್ ವಶಪಡಿಸಿಕೊಳ್ಳಲಾಗಿತ್ತು. ಮಗನ ಮನೆಯಲ್ಲಿ ರು. 4.80 ಲಕ್ಷ, ಕಚೇರಿಯಲ್ಲಿ 20.20 ಲಕ್ಷ ರುಪಾಯಿ ವಶಪಡಿಸಿಕೊಳ್ಳಲಾಗಿತ್ತು.
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯದ ಬಳಿಕ ಚುನಾವಣಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಒಂದು ಕಡೆ ನಗದು ರೂಪದಲ್ಲಿ 9 ಕೋಟಿ ರು. ಸಿಕ್ಕಿರುವ ಬೃಹತ್ ಮೊತ್ತವಾಗಿದೆ.