ಮೊಯಿಲಿಯನ್ನು ಮನೆಗೆ ಕಳುಹಿಸಿ: ಚಿಕ್ಕಬಳ್ಳಾಪುರ ಜನತೆಗೆ ಮೋದಿ ಕರೆ
ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕಳೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜನತೆಗೆ ನೀಡಿದ ಅನೇಕ..
ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕಳೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜನತೆಗೆ ನೀಡಿದ ಅನೇಕ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ಅವರನ್ನು ಎರಡನೇ ಬಾರಿ ಆಯ್ಕೆ ಮಾಡುವ ಅಗತ್ಯ ಇಲ್ಲ. ಮೊಯಿಲಿಯನ್ನು ಮನೆಗೆ ಕಳುಹಿಸುವಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿದ್ದಾರೆ.
ಇಂದು ಚಿಕ್ಕಬಳ್ಳಾಪುರದ ಕೊತ್ತನೂರು ಕಾಲೇಜು ಮೈದಾನದಲ್ಲಿ ನಡೆದ 'ಭಾರತ ಗೆಲ್ಲಿಸಿ' ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗ್ಯಾಸ್ ದರ ಏರಿಕೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಇದೆ. ಈ ಸಮಸ್ಯೆ ಪರಿಹಾರಕ್ಕೆ ಮೊಯಿಲಿ ಯಾವುದೇ ಪ್ರಯತ್ನ ಮಾಡಿಲ್ಲ. ಅಲ್ಲದೆ ಮೊಯಿಲಿ ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದರು. ಈ ವೇಳೆ ಅವರು ಐದು ಸಾವಿರ ಗ್ರಾಮ ನ್ಯಾಯಾಲಯ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮೋದಿ ಹೇಳಿದರು.
ಗುಜರಾತ್ನಲ್ಲೂ ಕುಡಿಯ ನೀರಿಗೆ ಹಾಹಾಕಾರವಿತ್ತು. ಅಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ನಾನು ಶ್ರಮಿಸಿದೆ. ನರ್ಮದಾ ನದಿಯಿಂದ ಸುಮಾರು 9 ಸಾವಿರ ಕಿ.ಮೀ. ಪೈಪ್ಲೈನ್ ನಿರ್ಮಿಸಿದ್ದೇವೆ ಎಂದರು.
ಇನ್ನು ಇದೇ ವೇಳೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದ ಮೋದಿ, ದೇವೇಗೌಡರೇ ಮೋದಿ ಪ್ರಧಾನಿಯಾದರೆ ರಾಜ್ಯ ಬಿಡುವುದಾಗಿ ಹೇಳಿದ್ದೀರಿ. ಆ ಬಗ್ಗೆ ನೀವೇನೂ ಚಿಂತಿಸಬೇಡಿ ನಾನು ಗುಜರಾತ್ನಲ್ಲಿ ನಿಮಗೆ ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಮತ್ತು ನಿಮ್ಮ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಲೇವಡಿ ಮಾಡಿದರು.