ಮೋದಿ ಪ್ರಧಾನಿಯಾಗಲ್ಲ, ದೇವೇಗೌಡ್ರು ನಿವೃತ್ತಿ ಹೊಂದಲ್ಲ: ಸಿದ್ದು
ಉಡುಪಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲ್ಲ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜಕೀಯದಿಂದ ನಿವೃತ್ತಿ ಹೊಂದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಉಡುಪಿಯಲ್ಲಿಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಎಂದೆಂದಿಗೂ ದೇಶದ ಪ್ರಧಾನಿಯಾಗಲ್ಲ. ಅದೇ ರೀತಿ ಹೆಚ್.ಡಿ. ದೇವೇಗೌಡ ಅವರು ಎಂದೆಂದಿಗೂ ರಾಜಕೀಯ ನಿವೃತ್ತಿ ಹೊಂದಲ್ಲ ಎಂದು ಲೇವಡಿ ಮಾಡಿದ್ದಾರೆ.
ಹೆಚ್.ಡಿ ದೇವೇಗೌಡ ವಿರುದ್ಧದ ಮೋದಿ ಹೇಳಿಕೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ದೇವೇಗೌಡರ ಬಗ್ಗೆ ನನಗೆ ಚನ್ನಾಗಿ ಗೊತ್ತಿದೆ. ಅವರು ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಹೊಂದಲ್ಲ ಎಂದರು.
ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂಬ ದೇವೇಗೌಡರ ಹೇಳಿಕೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಇಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಇಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ದೇವೇಗೌಡರೇ ನಾನು ನಿಮ್ಮ ಮಗನಿದ್ದಂತೆ, ನಾನು ಪ್ರಧಾನಿಯಾದ್ರೆ ನೀವು ಗುಜರಾತ್ಗೆ ಬನ್ನಿ, ಗುಜರಾತ್ನಲ್ಲಿ ನಾನು ನಿಮಗೆ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇನೆ. ನಿಮ್ಮ ಮಕ್ಕಳಿಗಿಂತ ಹೆಚ್ಚಾಗಿ ನಿಮ್ಮ ಸೇವೆ ಮಾಡ್ತೀನಿ. ನಿಮಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು.