ದೇಶದ ಅತೀ ದುರ್ಬಲ ಪ್ರಧಾನಿ ವಾಜಪೇಯಿ: ಸಂಜಯ್ ಝಾ
ಸ್ವತಂತ್ರ ಭಾರತದ ಅತ್ಯಂತ ದುರ್ಬಲ ಪ್ರಧಾನಿ ಎಂದರೆ ಅದು ಮಾಜಿ ಪ್ರಧಾನಿ ಅಟಲ್...
ನವದೆಹಲಿ: ಸ್ವತಂತ್ರ ಭಾರತದ ಅತ್ಯಂತ ದುರ್ಬಲ ಪ್ರಧಾನಿ ಎಂದರೆ ಅದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಸೋಮವಾರ ಹೇಳಿದ್ದಾರೆ.
ಗುಜರಾತ್ ನರಮೇಧಕ್ಕಾಗಿ ನರೇಂದ್ರ ಮೋದಿರನ್ನು ವಜಾಗೊಳಿಸಲು ಬಯಸಿದರೂ ಬಿಜೆಪಿ ಒಡ್ಡಿದ ಬೆದರಿಕೆಯಿಂದಾಗಿ ಹಾಗೆ ಮಾಡಲು ಸಾಧ್ಯವಾಗಿಲ್ಲ. ಇದನ್ನು ನೋಡಿದರೆ ವಾಜಪೇಯಿ ಅತ್ಯಂತ ದುರ್ಬಲ ಪ್ರಧಾನಿ ಎಂಬುದು ತಿಳಿಯುತ್ತದೆ ಎಂದು ಸಂಜಯ್ ಝಾ ಟ್ವೀಟ್ ಮಾಡಿದ್ದಾರೆ.
ಸಂಜಯ್ ಝಾ ಅವರ ಟ್ವೀಟ್ನ ಪ್ರಕಾರ, ವಾಜಪೇಯಿ ಅವರು ಉಗ್ರರಿಗೆ ಸಂಸತ್ತಿನ ಮೇಲೆ ದಾಳಿ ಎಸಗಲು ಅವಕಾಶ ಮಾಡಿಕೊಟ್ಟ ದೇಶದ ಅತ್ಯಂತ ದುರ್ಬಲ ಪ್ರಧಾನಿ. ಕಂದಹಾರ್ ವಿಮಾನ ಅಪಹರಣಕಾರರಿಗೆ ಮಣಿದು ಅವರ ಆದೇಶದ ಪ್ರಕಾರ ಭಾರತದ ಜೈಲಿನಲ್ಲಿದ್ದ ಉಗ್ರರನ್ನು ಭದ್ರತೆಯೊಂದಿಗೆ ಬಿಡುಗಡೆ ಮಾಡಿ ಒತ್ತೆಯಾಳುಗಳನ್ನು ವಿನಿಮಯಿಸಿಕೊಂಡ ದುರ್ಬಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದಿದ್ದಾರೆ.
ಭಾರತೀಯ ನೆಲದಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಪಾಕ್ ಅಧ್ಯಕ್ಷ ಮುಷರಫ್ ಗೆ ಅವಕಾಶ ನೀಡಿದ ದುರ್ಬಲ ಪ್ರಧಾನಿ ಅಟಲ್, ಕಾರ್ಗಿಲ್ ಸಮರದಲ್ಲಿ ಹಲವು ಭಾರತೀಯ ಸೈನಿಕರನ್ನು ಬಲಿಗೊಟ್ಟ ಹೊರತಾಗಿಯೂ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರನ್ನು ಆಲಂಗಿಸಿಕೊಂಡ ದುರ್ಬಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮನಮೋಹನ್ಸಿಂಗ್ ಅವರು ಯುಪಿಎ ಸರಕಾರದಲ್ಲಿ ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿದ್ದರು ಎಂದು ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಮತ್ತು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪರಾಕ್ ಅವರು ತಮ್ಮ ಕೃತಿಗಳಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಟೀಕೆ, ಖಂಡನೆಗೆ ಕಾಂಗ್ರೆಸ್ ಗುರಿಯಾಗಿದೆ. ಈ ಸಂದರ್ಭದಲ್ಲಿ ಸಂಜಯ್ ಝಾ ಅವರು ಕಾಂಗ್ರೆಸ್ನ ಮುಖ ಉಳಿಸಲು ಈ ರೀತಿ ಟ್ವೀಟ್ ಮಾಡಿರುವುದು ಸಹಜವೇ ಆಗಿದೆ.