ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಅಂಬರೀಷ್
ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ ಎಂದು ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಸೋಮವಾರ ಹೇಳಿದ್ದಾರೆ.
ಮಂಡ್ಯ: ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ ಎಂದು ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಸೋಮವಾರ ಹೇಳಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅಂಬರೀಷ್, ರಾಜ್ಯಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಉತ್ತಮ ಅಭಿವೃದ್ಧಿ ಸಾಧಿಸಿರುವುದರಿಂದ ಕರ್ನಾಟಕ ಇತರ ರಾಜ್ಯಗಳಿಗಿಂತ ಮುಂದಿದೆ. ಇದಕ್ಕೆಲ್ಲ ಕಾರಣವಾಗಿದ್ದು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಹಲವು ಯೋಜನೆಗಳು ಎಂದರು. ಅಲ್ಲದೆ ರೋಜ್‌ಗಾರ್ ಯೋಜನೆ ಮೂಲಕ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ ಎಂದು ಅಂಬರೀಷ್ ತಿಳಿಸಿದರು.
ರಾಜ್ಯ ಸರ್ಕಾರ ಬಡವರಿಗಾಗಿ 'ಅನ್ನಭಾಗ' ಯೋಜನೆ ಹಾಗೂ ಬಡ ವಿದ್ಯಾರ್ಥಿಗಳಿಗಾಗಿ 'ಕ್ಷೀರಭಾಗ್ಯ' ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಕೇಂದ್ರದಲ್ಲಿ ಮಾಹಿತಿ ಹಕ್ಕು, ಲೋಕಪಾಲ್ ಜಾರಿಗೆ ತಂದಿದ್ದು ಕಾಂಗ್ರೆಸ್‌ನ ಸಾಧನೆ ಎಂದರು. ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂಧಿಸಿ ರೈತರಿಗೆ ಸಹಾಯಧನ ನೀಡಿದೆ. ಅಲ್ಲದೆ ರೈತರ ಅನುಕೂಲಕ್ಕಾಗಿ ಮಂಡ್ಯದ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿ ಮಾಡಿದೆ ಎಂದರು.
ಇದೇ ವೇಳೆ, ಪರೋಕ್ಷವಾಗಿ ಹಾಲಿ ಸಂಸದೆ ರಮ್ಯಾಳ ಕಿವಿ ಹಿಂಡಿದ ಅಂಬಿ, ರಮ್ಯಾ ಇನ್ನು ಚಿಕ್ಕವಳು, ಮುಂದೆ ಸರಿಯಾಗುತ್ತಾಳೆ. ಈ ಹಿಂದೆ ಕಾವೇರಿಗಾಗಿ ನಾನು ಕೇಂದ್ರ ಸಚಿವ ಸ್ಥಾನವನ್ನು ತ್ಯಜಿಸಿದ್ದೇ ಆನಂತರ ಜಿಲ್ಲೆಯ ಜನತೆ ನನ್ನ ಕೈಬಿಡದೆ ಬೆಂಬಲಿಸಿದ್ದೀರ. ಅದೇ ರೀತಿ ಕಳೆದ ಆರು ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ರಮ್ಯಾಗೆ ನಿಮ್ಮ ಮತ ನೀಡಿ ಅವಳನ್ನು ಗೆಲ್ಲಿಸಿ ಎಂದರು.
ರಾಜಕೀಯದಲ್ಲಿ ನನ್ನ ಪತ್ನಿ ಮಕ್ಕಳಷ್ಟೇ ಬೆಳೆಯಬೇಕು ಎಂಬ ದುರಾಸೆ ನನಗಿಲ್ಲ. ರಾಜಕೀಯದಲ್ಲಿ ಬೇರೆಯವರೂ ಬೆಳೆಯಬೇಕು. ಮುಖ್ಯವಾಗಿ ಯುವಕರು ರಾಜಕೀಯದಲ್ಲಿ ಬೆಳೆಯಬೇಕು ಹಾಗ ಮಾತ್ರ ದೇಶ ಇನ್ನು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮಾಜಿ ಸಿಎಂ ಎಸ್. ಎಂ. ಕೃಷ್ಣ ಹಾಗೂ ಸಂಸದೆ ರಮ್ಯಾ ಭಾಗವಹಿಸಿದ್ದರು.