ಮೋದಿ ದೇಶದ ಭರವಸೆಯ ನಾಯಕ: ಪವನ್ ಕಲ್ಯಾಣ್
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈ ದೇಶದ ಒಬ್ಬ ಭರವಸೆಯ ನಾಯಕ ಎಂದು ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ನೂತನ ಪಕ್ಷ ಜನಸೇನಾದ ಮುಖ್ಯಸ್ಥ ಪವರ್ ಸ್ಟಾರ್..
ಕೋಲಾರ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈ ದೇಶದ ಒಬ್ಬ ಭರವಸೆಯ ನಾಯಕ ಎಂದು ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ನೂತನ ಪಕ್ಷ ಜನಸೇನಾದ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಪವನ್, ದೇಶದಲ್ಲಿ ಜನತೆ ಬದಲಾವಣೆ ಬಯಸಿದ್ದಾರೆ. ಮೋದಿ ಒಬ್ಬ ಭರವಸೆಯ ನಾಯಕ. ಅವರು ಭಯ ಹುಟ್ಟಿಸುವ ನಾಯಕ ಅಲ್ಲ. ನರೇಂದ್ರ ಮೋದಿಯನ್ನು ಹಿಂದುಗಳು ಮಾತ್ರ ಅಲ್ಲ. ಮುಸ್ಲಿಮರು ಸಹ ಇಷ್ಟಪಡುತ್ತಾರೆ ಎಂದು ಹೇಳಿದರು. ಅಲ್ಲದೆ ದೇಶದ ಹಿತದೃಷ್ಟಿಯಿಂದ ಎನ್‌ಡಿಎಗೆ ಮತ ನೀಡುವಂತೆ ಪವರ್ ಸ್ಚಾರ್ ಕೋಲಾರ ಜನತೆಗೆ ಕರೆ ನೀಡಿದರು.
ಕೇವಲ ಪ್ರಚಾರಕ್ಕಾಗಿ ಹಾಗೂ ಸಿನಿಮಾ ಡೈಲಾಗ್ ಹೊಡೆಯಲು ನಾನು ಇಲ್ಲಿಗೆ ಬಂದಿಲ್ಲ. ನಟನೆ ಕೆಲವು ವರ್ಷಗಳು ಮಾತ್ರ ಮಾಡಬಹುದು. ಆದರೆ ನನ್ನ ಜೀವ ಇರುವವರೆಗೂ ನಾನು ಜನ ಸೇವೆ ಮಾಡುತ್ತೇನೆ ಎಂದು ಪವನ್ ಕಲ್ಯಾಣ್ ಹೇಳಿದರು.
ಮೊದಲು ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಪವನ್, ಭಾಷೆಗಿಂತ ಭಾವನೆ ಮುಖ್ಯ, ಕರ್ನಾಟಕದಲ್ಲಿ ಬಹುಭಾಷಿಗಳು ಇದ್ದರೂ ಏಕತೆ ಇದೆ. ಆದರೆ ಆಂಧ್ರಪ್ರದೇಶದಲ್ಲಿ ಒಂದೇ ಭಾಷೆ ಇದರೂ ಐಕ್ಯತೆ ಇಲ್ಲ. ಆಂಧ್ರಪ್ರದೇಶದ ಇಬ್ಭಾಗವಾಗಲು ಕಾಂಗ್ರೆಸ್ ಸರ್ಕಾರ ಕಾರಣ ಎಂದು ಪವನ್ ಆರೋಪಿಸಿದರು.
ಇದೇ ವೇಳೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಪವನ್ ಕಲ್ಯಾಣ್, ಮುನಿಯಪ್ಪ ಅವರು ಕೋಲಾರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಅವರು ಕೋಲಾರದಲ್ಲಿ ರೇಲ್ವೆ ಕೋಚ್ ಫ್ಯಾಕ್ಟರಿ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾಕೆ ನಿರ್ಮಿಸಿಲ್ಲ ಎಂದು ಕೋಲಾರ ಜನ ಕೇಳುತ್ತಿದ್ದಾರೆ ಎಂದರು.