ರಾಜ್ಯಕ್ಕೆ ಪ್ರಚಾರಕ್ಕೆ ಆಗಮಿಸದ ಆಡ್ವಾಣಿ, ಸುಷ್ಮಾ ಸ್ವರಾಜ್
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸೇರಿದಂತೆ ಬಹುತೇಕ ಎಲ್ಲಾ ಚುನಾವಣೆಗಳಲ್ಲೂ ಸ್ಟಾರ್ ಪ್ರಚಾರಕರಾಗಿ..
ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸೇರಿದಂತೆ ಬಹುತೇಕ ಎಲ್ಲಾ ಚುನಾವಣೆಗಳಲ್ಲೂ ಸ್ಟಾರ್ ಪ್ರಚಾರಕರಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಹಾಗೂ ಸುಷ್ಮಾ ಸ್ವರಾಜ್ ಅವರು ಈ ಬಾರಿ ಮುನಿಸಿಕೊಂಡಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬಿದ್ದಿದೆ. ಆಡ್ವಾಣಿ ಅವರಿಗೆ ಮೊದಲಿನಿಂದಲೂ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ಹೀಗಾಗಿ ಅವರು ಪ್ರತಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಅವರು ರಾಜ್ಯದಿಂದ ದೂರ ಉಳಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕದ ಪಕ್ಷದ ಬೆಳವಣಿಗೆಗಳ ಬಗ್ಗೆ ಆಡ್ವಾಣಿ ಅವರು ಹೆಚ್ಚು ಗಮನ ಹರಿಸಿದ್ದರು. ಅವರು ಪಟ್ಟು ಹಿಡಿದಿದ್ದರಿಂದಲೇ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ರಾಜಿನಾಮೆ ನೀಡಬೇಕಾಗಿ ಬಂತು. ಆದರೆ ಈಗ ಅವರ ವಿರೋಧದ ನಡುವೆಯೂ ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡಿದ್ದೇ ಆಡ್ವಾಣಿ ಅವರ ಮುನಿಸಿಗೆ ಕಾರಣ ಎನ್ನಲಾಗುತ್ತಿದೆ.
ಅದೇ ರೀತಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೂ ಕರ್ನಾಟಕಕ್ಕೂ ರಾಜಕೀಯವಾಗಿ ವಿಶೇಷ ಸಂಬಂಧವಿದೆ. 1999ರಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಬಳ್ಳಾರಿಯಿಂದ ಸ್ಪರ್ಧಿಸಿ ಪರಾಭವಗೊಂಡರೂ ರಾಜ್ಯದ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅವರ ಆರ್ಶೀವಾದದಿಂದಲೇ ಬಳ್ಳಾರಿಯ ಗಣಿ ಧಣಿಗಳು ರಾಜಕೀಯವಾಗಿ ಪ್ರಬಲರೂ ಆಗಿದ್ದರು. ಆದರೆ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಳ್ಳಾರಿ ಗಣಿಧಣಿಗಳು ಜೈಲು ಪಾಲಾದ ನಂತರ ರೆಡ್ಡಿ ಸಹೋದರರಿಂದ ಸುಷ್ಮಾ ದೂರವಾಗಿದ್ದರು. ಅಲ್ಲದೆ ಇತ್ತೀಚಿಗೆ ಶ್ರೀರಾಮುಲು ಅವರು ಮರಳಿ ಪಕ್ಷ ಸೇರ್ಪಡೆಯಾಗುವುದಕ್ಕೂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ರಾಜ್ಯ ಬಿಜೆಪಿಯ ವಿದ್ಯಾಮಾನಗಳು ಹಾಗೂ ಯಡಿಯೂರಪ್ಪ, ಶ್ರೀರಾಮುಲು ಮತ್ತಿತರರು ಬಿಜೆಪಿಗೆ ಮರಳಿ ಬಂದಿರುವುದು ಮತ್ತು ಅವರಿಗೆ ಪಕ್ಷದ ಟಿಕೆಟ್ ನೀಡಿರುವುದು ಈ ಇಬ್ಬರು ಮುಖಂಡರಿಗೆ ಮುಜುಗರವಾಗಿದ್ದು, ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿಲ್ಲ ಎನ್ನಲಾಗಿದೆ. ರಾಜ್ಯ ಬಿಜೆಪಿ ಮುಖಂಡರು ಸಹ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಪದೇಪದೆ ಕರೆಯಿಸಿ ಪ್ರಚಾರ ಮಾಡಲು ಉತ್ಸಾಹ ತೋರಿದರೇ ಹೊರತು, ಆಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಪ್ರಚಾರಕ್ಕೆ ಕರೆಯಿಸಲು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.