ಮುಳುಗಿದ ಹಡಗು: 2 ಸಾವು, 100 ಮಂದಿ ಕಣ್ಮರೆ
ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕೊಂಡೊಯ್ಯುತ್ತಿದ್ದ ಹಡಗೊಂದು ಮುಳುಗಿದ್ದು...
ದಕ್ಷಿಣ ಕೊರಿಯಾ: ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕೊಂಡೊಯ್ಯುತ್ತಿದ್ದ ಹಡಗೊಂದು ಮುಳುಗಿದ್ದು, ಈ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು 100ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ತಿಳಿಸಿದೆ.
ದಕ್ಷಿಣ ಕೊರಿಯಾದ ಬೀಜು ದ್ವೀಪದಿಂದ ಹೊರಟಿದ್ದ ಹಡಗಿನಲ್ಲಿ ಸುಮಾರು 350 ಪ್ರೌಢಶಾಲೆಯ ವಿದ್ಯಾರ್ಥಿಗಳು, 100ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ 12ಕ್ಕೂ ಹೆಚ್ಚು ಸಿಬ್ಬಂದಿಗಳು ಇದ್ದರು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಸಮುದ್ರದ ಮಧ್ಯೆ ಹಡಗು ಬಲಕ್ಕೆ ವಾಲುತ್ತಿದ್ದು, ಕ್ಯಾಪ್ಟನ್ ಆಪಾಯದ ಸಿಗ್ನಲ್ ಕಳುಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ 12 ಕ್ಕೂ ಹೆಚ್ಚು ಜೀವ ರಕ್ಷಕ ದೋಣಿಗಳು ಹಾಗೂ ಹೆಲಿಕಾಪ್ಟರ್ಗಳ ಮೂಲಕ ನೂರಾರು ಮಂದಿಯನ್ನು ರಕ್ಷಿಸಲಾಗಿದೆ.
ಹಡಗಿನಲ್ಲಿ ಇದ್ದ ಬಹುತೇಕ ಪ್ರಯಾಣಿಕರು ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದು ರಜಾಕಾಲದ ಪ್ರವಾಸ ಹೊರಟಿದ್ದರು. 'ಈವರೆಗೆ 368 ಮಂದಿಯನ್ನು ರಕ್ಷಿಸಲಾಗಿದೆ' ಎಂದು ಭದ್ರತೆ ಮತ್ತು ಸಾರ್ವಜನಿಕ ಆಡಳಿತ ಉಪಸಚಿವ ಲೀ ಗ್ಯೊಂಗ್-ಓಗ್ ಸಿಯೋಲ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಂಜಾನೆ 9 ಗಂಟೆಗೆ ಹಡಗಿನಿಂದ ಅಪಾಯದ ಸಂಕೇತಗಳು ಬರತೊಡಗಿದ್ದು ಈ ಸಂಕೇತಗಳ ಆಗಮನದ ಎರಡು ಗಂಟೆಗಳ ಒಳಗಾಗಿ ಹಡಗು ಪಲ್ಟಿಯಾದದ್ದರಿಂದ ಕಣ್ಣರೆಯಾಗಿರುವ 107 ಮಂದಿಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತ ಪಡಿಸಿದ್ದಾರೆ.
ಹಡಗಿನೊಳಕ್ಕೆ ನೀರು ನುಗ್ಗಿ ಅದು ಮುಳುಗುತ್ತಿದ್ದಾಗ ಭಯಗ್ರಸ್ತ ಪ್ರಯಾಣಿಕರು ಜೀವರಕ್ಷಕ ಜಾಕೆಟ್ ಗಳನ್ನು ಧರಿಸಿಕೊಂಡು ಪುಟ್ಟ ದೋಣಿಗಳಿಗೆ ಏರಲು ಧಾವಂತ ಪಡುತ್ತಿದ್ದ ದೃಶ್ಯದ ವೈಮಾನಿಕ ಚಿತ್ರಗಳನ್ನು 'ಡ್ರಮಾಟಿಕ್' ಟೆಲಿವಿಷನ್' ಪ್ರಸಾರ ಮಾಡಿತ್ತು.