ವಿವಾದ ಸೃಷ್ಟಿಸಿದ ಮೋದಿ ಸಂದರ್ಶನ: ಸಂಪಾದಕ ರಾಜಿನಾಮೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಂದರ್ಶನ 'ಫಿಕ್ಸಿಂಗ್'...
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಂದರ್ಶನ 'ಫಿಕ್ಸಿಂಗ್' ಎಂದು ಆರೋಪಿಸಿ ಇಂಡಿಯಾ ಟಿವಿ ಸಂಪಾದಕೀಯ ನಿರ್ದೇಶಕ ಖ್ಯಾಮರ್ ವಹೀದ್ ನಖ್ವಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನಖ್ವಿಯ ರಾಜಿನಾಮೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಇದು 'ಖಾಸಿಗಾಗಿ ಸುದ್ದಿ' ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮೋದಿ ಹಾಗೂ ಅವರ ಪಕ್ಷ ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ. ಈ ಮಧ್ಯೆ ಸುದ್ದಿವಾಹಿನಿಯ ನಿರ್ಧಾರವನ್ನು ಪ್ರಶ್ನಿಸಿ ರಾಜಿನಾಮೆ ಸಲ್ಲಿಸಿರುವ ನಖ್ವಿ ಅವರನ್ನು ಆಮ್ ಆದ್ಮಿ ಪಕ್ಷ ಅಭಿನಂದಿಸಿದೆ.
ಪತ್ರಕರ್ತರ ಮೇಲೆ ಬಿಜೆಪಿ ಒತ್ತಡ ಹೇರುತ್ತಿದ್ದು, ಈ ಹಿಂದೆಯೂ ಮೋದಿ ಬಗ್ಗೆ ಬರೆದಿದ್ದಕ್ಕೆ 'ದಿ ಹಿಂದು' ಪತ್ರಿಕೆಯ ಹಿರಿಯ ಪತ್ರಕರ್ತೆಗೆ ಬಿಜೆಪಿ ಬೆದರಿಕೆ ಹಾಕಿತ್ತು. ಈ ಸಂಬಂಧ ಆ ಪತ್ರಕರ್ತೆ ಕೇಸ್ ಸಹ ದಾಖಲಿಸಿದ್ದರು ಎಂದು ಕಾಂಗ್ರಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಅಜಯ್ ಮಾಕೇನ್ ಅವರು ಹೇಳಿದ್ದಾರೆ.
ಎಪ್ರಿಲ್ 12ರಂದು 'ಆಪ್ ಕಿ ಅದಾಲತ್' ಎಂಬ ಹೆಸರಿನಲ್ಲಿ ಮೋದಿ ಸಂದರ್ಶನ ಪ್ರಸಾರವಾಗಿತ್ತು. ಈ ಸಂದರ್ಶನ ಪ್ರಸಾರವಾದ ಮರು ದಿನವೇ ನಖ್ವಿ ಅವರು ರಾಜಿನಾಮೆ ನೀಡಿದ್ದರು. ಇಂಡಿಯಾ ಟಿವಿ ಅಧ್ಯಕ್ಷ ಶರ್ಮಾ ಅವರು ಈ ಸಂದರ್ಶನ ನಡೆಸಿದ್ದರು.
ರಾಜಿನಾಮೆ ನಂತರ ನಖ್ವಿ ಅವರು ದೂರವಾಣಿ ಅಥವಾ ಇ-ಮೇಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೆ ಕಾಂಗ್ರೆಸ್ ಹಾಗೂ ಎಎಪಿ ತಮಗೆ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಟ್ವಿಟ್ ಮಾಡಿರುವ ನಖ್ವಿ, ತಮ್ಮ ರಾಜಿನಾಮೆ ವಿವಾದಿಂದ ರಾಜಕಾರಣಿಗಳು ದೂರು ಉಳಿಯಬೇಕು ಎಂದು ಮನವಿ ಮಾಡಿದ್ದಾರೆ.