ಸ್ಪಾಟ್ ಫಿಕ್ಸಿಂಗ್ನಲ್ಲಿ ಶ್ರೀನಿವಾಸನ್ ಸೇರಿ 12 ಆಟಗಾರರು ಭಾಗಿ
ನವದೆಹಲಿ: ಇಂಡಿಯನ್ ಪ್ರಿಮೀಯರ್ ಲೀಗ್ನ 6ನೇ ಆವೃತ್ತಿಯ ಸ್ಪಾಟ್ ಫಿಕ್ಸಿಂಗ್ ಹಗರಣದ ಮುದಗಲ್ ಸಮಿತಿಯ ತನಿಖಾ ವರದಿಯನ್ನು ಸುಪ್ರೀಂಕೋರ್ಟ್ ಬುಧವಾರ ಬಹಿರಂಗಗೊಳಿಸಿದ್ದು, ವರದಿಯಲ್ಲಿ ಶ್ರೀನಿವಾಸನ್ ಸೇರಿ 12 ಆಟಗಾರರ ಹೆಸರು ಹೊರಬಿದ್ದಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ನಡೆಸಿದ್ದ ಮುದಗಲ್ ವರದಿಯಲ್ಲಿ ಶ್ರೀನಿವಾಸನ್ ಅವರ ಪಾತ್ರ ಇರುವುದಾಗಿ ತಿಳಿದು ಬಂದಿರುವುದರಿಂದ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಮಾರ್ಚ್ 28 ರಂದು ನೀಡದ್ದ ಮಧ್ಯಂತರ ಆದೇಶವನ್ನೇ ಕೋರ್ಟ್ ಎತ್ತಿ ಹಿಡಿದಿದೆ.
ಸುಪ್ರೀಂಕೋರ್ಟ್ನ ಮಧ್ಯಂತರ ಆದೇಶದಂತೆ ಬಿಸಿಸಿಐ ಹಂಗಾಮಿ ನಿರ್ದೇಶಕರಾಗಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ರನ್ನು ನೇಮಿಸಿತ್ತು. ಆದರೆ ಆ ಸ್ಥಾನವನ್ನು ನಿರ್ವಹಿಸಲು ನಿರ್ಧರಿಸಿಲ್ಲ ಹೀಗಾಗಿ ಇಂದು ದುಬೈನಲ್ಲಿ ನಡೆಯಲಿರುವ 7ನೇ ಆವೃತ್ತಿಯ ಐಪಿಎಲ್ನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾಗಿ ಸುಂದರ್ ರಾಮನ್ ಅವರೇ ಮುಂದುವರೆಯುವಂತೆ ಸೂಚಿಸಬೇಕು ಎಂದು ಸುಪ್ರೀಂಕೋರ್ಟ್ ಶಿಫಾರಸ್ಸು ಮಾಡಿದ್ದರು. ಹೀಗಾಗಿ ಸುಂದರ್ ರಾಮನ್ ಅವರೇ ಕಾರ್ಯನಿರ್ವಹಿಸುತ್ತಾರೆ ಎಂದು ಕೋರ್ಟ್ ಹೇಳಿದೆ.
ಇದೇ ವೇಳೆ, ಬಿಸಿಸಿಐನ್ನು ತರಾಟೆಗೆ ತೆಗೆದು ಕೊಂಡಿರುವ ಕೋರ್ಟ್ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಿದ್ದೀರಿ ಎಂಬುದರ ಕುರಿತಾಗಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಅಲ್ಲದೆ ಪ್ರಕರಣ ಬೆಳಕಿಗೆ ಬಂದ ನಂತರದ ಘಟಾನಾವಳಿಗಳನ್ನು ಸುಪ್ರೀಂಕೋರ್ಟ್ ಗಮನಿಸುತ್ತಿದ್ದು, ಕಣ್ಣು ಮುಚ್ಚಿ ಕುಳಿತಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ. ಪ್ರಕರಣವನ್ನು ಸಿಬಿಐಗೆ ಅಥವಾ ಎಸ್ಐಟಿಗೆ ವಹಿಸುವ ಒಲವು ಕೋರ್ಟ್ಗೆ ಇಲ್ಲ ಎಂದು ಪೀಠ ಹೇಳಿದೆ.