ಈ ಬಾರಿಯೂ ಗೆಲುವು ನನ್ನದೇ: ದೇವೇಗೌಡ ವಿಶ್ವಾಸ
ಹೊಳೆನರಸೀಪುರ: ಹಾಸನದಲ್ಲಿ ಈ ಬಾರಿಯೂ ಗೆಲುವು ತಮ್ಮದೇ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ತವರು ಜಿಲ್ಲೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ದೇವೇಗೌಡರು ಇಂದು ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ ಚಲಾಯಿಸಿದರು.
ಪ್ರತಿ ಚುನಾವಣೆಗಳಲ್ಲಿಯೂ ತಾಲೂಕಿನ ಪಡುವಲಹಿಪ್ಪೆ ಗ್ರಾಮಕ್ಕೆ ತೆರಳಿ ತಮ್ಮ ಕುಟುಂಬದವರೊಂದಿಗೆ ಮತಚಲಾಯಿಸುವ ಗೌಡರು, ಈ ಬಾರಿಯೂ ಇಲ್ಲಿಯೇ ಮತದಾನ ಮಾಡಿದರು.
ಮತದಾನದ ಬಳಿಕ ಮಾತನಾಡಿದ ಮಾಜಿ ಪ್ರಧಾನಿ, ಈ ಬಾರಿಯೂ ಹಾಸನದಲ್ಲಿ ನನ್ನದೆ ಗೆಲವು ಎಂದರು. ಅಲ್ಲದೆ ರಾಜ್ಯದಲ್ಲಿ ಚುನಾವಣೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ತಾವು ಬೆರೆ ರಾಜ್ಯಗಳಲ್ಲಿ ಪ್ರಚಾರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪೂಜೆ ನಂತರ ಮತ: ಮತದಾನ ಆರಂಭಗೊಂಡ ನಂತರ ಬೆಳಗಿನ 8 ಗಂಟೆಯೊಳಗೆ ಗೌಡರು ಮತಚಲಾಯಿಸುವುದು ವಾಡಿಕೆ. ಆದರೆ, ದೇವರು, ದೇವಸ್ಥಾನ, ಪೂಜೆಗಳನ್ನು ಬಹಳವಾಗಿ ನಂಬುವ ಗೌಡರು ಈ ಬಾರಿ ಮಧ್ಯಾಹ್ನದವರೆವಿಗೂ ಮತಗಟ್ಟೆಯ ಬಳಿ ಸುಳಿಯದೇ, ಕಡೆಗೆ 12.30ರ ಹೊತ್ತಿಗೆ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ ಗ್ರಾಮದಲ್ಲಿನ ದೇವಾಲಯದಲ್ಲಿ ಕುಟುಂಬದವರೊಂದಿಗೆ ಪೂಜೆ ಸಲ್ಲಿಸಿ ನಂತರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.