ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಆರ್.ಕೆ. ಧವನ್
ನವದೆಹಲಿ: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ನೌಕಾ ಸೇನಾಧಿಕಾರಿ ರಾಬಿನ್.ಕೆ. ಧವನ್ ಅವರು ನೇಮಕಗೊಂಡಿದ್ದಾರೆ.
ಎರಡು ತಿಂಗಳಿಂದ ಖಾಲಿಯಾಗಿ ಉಳಿದಿದ್ದ ನೌಕಾಪಡೆ ಮುಖ್ಯಸ್ಥ ಸ್ಥಾನಕ್ಕೆ ಆರ್.ಕೆ. ಧವನ್ ಅವರನ್ನು ಕ್ಯಾಬಿನೆಟ್ನ ನೇಮಕಾತಿ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಸದ್ಯ ನೌಕಾಪಡೆಯ ನೌಕಾ ಸೇನಾಧಿಕಾರಿಯಾಗಿ ಧವನ್ ಕಾರ್ಯನಿರ್ವಹಿಸುತ್ತಿದ್ದರು.
ಫೆ. 26ರಂದು ಜಲಾಂತರ್ಗಾಮಿ ಸಿಂಧುರಕ್ಷಕ್ನಲ್ಲಿ ಆಕಸ್ಮಿಕ ಬೆಂಕಿ ದುರಂತ ಸಂಭವಿಸಿದ್ದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಆಗಿನ ನೌಕಪಡೆಯ ಮುಖ್ಯಸ್ಥರಾಗಿದ್ದ ಡಿ.ಕೆ. ಜೋಶಿ ಅವರು ರಾಜಿನಾಮೆ ಸಲ್ಲಿಸಿದ್ದರು.
ಜೋಷಿ ಅವರ ನಿರ್ಗಮನದ ಬಳಿಕ ಪ್ರಭಾರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಧವನ್ ಅವರು ಈ ಉನ್ನತ ಹುದ್ದೆ ವಹಿಸಿಕೊಳ್ಳುವ ಸಂಭಾವ್ಯ ಅಧಿಕಾರಿ ಎನಿಸಿದ್ದರು.
ವಿಶ್ವದ ಬೃಹತ್ ನೌಕಾ ಪಡೆಗಳಲ್ಲಿ ಒಂದೆನಿಸಿರುವ ಭಾರತೀಯ ನೌಕಾಪಡೆಯು ಕಳೆದ 50 ದಿನಗಳಿಂದ ಮುಖ್ಯಸ್ಥನೇ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು.