ಪ್ರಿಯಾಂಕ ವಾದ್ರಾ ವಿರುದ್ಧ ದೂರು ದಾಖಲು
ಅಮೇಥಿ: ಜೀವ ಬೆದರಿಕೆ ಆರೋಪದಡಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ವಾದ್ರಾ ವಿರುದ್ಧ ಅಮೇಥಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ಪ್ರಿಯಾಂಕ ವಾದ್ರಾರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಅಮೇಥಿ ಕ್ಷೇತ್ರದ ಅಭ್ಯರ್ಥಿ ಕುಮಾರ್ ವಿಶ್ವಾಸ್ ಅಮೇಥಿಯ ಗೌರಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಂಗ್ರೆಸ್ನ ಗಾಂಧಿ ಕುಟುಂಬದವರಿಂದ ಪ್ರಾಣ ಬೆದರಿಕೆ ಇದೆ ಎಂದು ಆರೋಪಿಸಿ ಕುಮಾರ್ ವಿಶ್ವಾಸ್ ಇಂದು ಬೆಳಗ್ಗೆ ದೂರು ನೀಡಲು ಮುಂದಾಗಿದ್ದರು. ಆದರೆ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರಿಂದ ಕುಮಾರ್ ವಿಶ್ವಾಸ್ ತಮ್ಮ ಬೆಂಬಲಿಗರೊಂದಿಗೆ ಧರಣೆ ನಡೆಸಿದರು. ಇದಾದ ನಂತರ ಪ್ರಿಯಾಂಕಾ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪರ ಪ್ರಿಯಾಂಕ ವಾದ್ರಾ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಈ ವೇಳೆ ವ್ಯಕ್ತಿಯೋರ್ವ ರಾಹುಲ್ ಗಾಂಧಿಗೆ ಪ್ರತಿಸ್ಪರ್ಧಿಯಾಗಿರುವ ಕುಮಾರ್ ವಿಶ್ವಾಸ್ರನ್ನು ಕೊಲೆ ಮಾಡಿರುವುದಾಗಿ ಹೇಳಿದ್ದ, ಇದರ ಕುರಿತಾಗಿ ಮಾತನಾಡಲು ಮನೆಗೆ ಬರುವಂತೆ ಹೇಳಿದ್ದಾರೆ ಎಂಬುದು ವಿಶ್ವಾಸ್ ಆರೋಪವಾಗಿದೆ.